WELCOME !

WELCOME ! No images or posts on this blog may be copied or reproduced without owners permission.
Showing posts with label VTA. Show all posts
Showing posts with label VTA. Show all posts

Friday, October 1, 2010

ನಮ್ಮ ಬೆಂಗಳೂರಿನಲ್ಲೂ ಇಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದ್ರೆ ? ( ಭಾಗ - ೨)


ಇನ್ನಷ್ಟು ವಿಶೇಷಗಳು
* ಪ್ರತಿಯೊಂದು ಬಸ್ ನಿಲ್ದಾಣದಲ್ಲೂ ಆ ಮಾರ್ಗದಲ್ಲಿ ಚಲಿಸುವ ಬಸ್‌ಗಳ ಸಂಖ್ಯೆಯನ್ನು ದಪ್ಪಕ್ಷರಗಳಲ್ಲಿ ನಮೂದಿಸಲಾಗಿರತ್ತೆ. ಮಾಹಿತಿ ವಿಚಾರಣೆಗಾಗಿ ಕರೆ ಮಾಡಬೇಕಾದ ಸಂಖ್ಯೆಯೂ ಅಲ್ಲಿರತ್ತೆ (ಪಕ್ಕದಲ್ಲಿದೆ ಒಂದು ಮಾದರಿ ಬೋರ್ಡ್). 

* ನಿಲ್ದಾಣಗಳು ಚಿಕ್ಕದಾಗಿದ್ದರೂ ಚೊಕ್ಕವಾಗಿ ಇರತ್ವೆ. ಪ್ರಯಾಣಿಕರಿಗೆ ಬೇಕಾದ ಅಗತ್ಯ ಮಾಹಿತಿಗಳು, ಬಸ್ಸಿನ ಸಮಯ,  ಮಾರ್ಗ ನಕ್ಷೆಗಳೂ ಇಲ್ಲಿ ಲಭ್ಯ.ಆರಾಮವಾಗಿ ಕೂರಲು ಸುಖಾಸನಗಳು, ನೆರಳಿಗಾಗಿ ಒಳ್ಳೆಯ ಛಾವಣಿಗಳು , ಸಂದೇಶಗಳ ಪ್ರಕಟಣೆಗಳಿಗಾಗಿ ಧ್ವನಿ ವರ್ಧಕ ವ್ಯವಸ್ಥೆ , ಎಲೆಕ್ಟ್ರಾನಿಕ್ ಗಡಿಯಾರಗಳು...ಹುಮ್ ಹೇಳ್ತಾ ಹೋದ್ರೆ ದೊಡ್ಡ ಪಟ್ಟಿನೇ ಆಗತ್ತೇನೋ ! ಕೆಳಗೆ ಬಸ್ ಮತ್ತು ಲೈಟ್ ರೈಲ್ ನಿಲ್ದಾಣಗಳ ೩ ಚಿತ್ರ ಹಾಕ್ತ ಇದ್ದೀನಿ.ನಿಮ್ಮ ಕಲ್ಪನೆಗಳ ಜೊತೆ ಹೊಂದಾಣಿಕೆ ಮಾಡ್ಕೊಂಡು ನೋಡಿ.



*  ಇನ್ನೊಂದು ಅದ್ಭುತವಾದ ವಿಷಯ ಅಂದ್ರೆ ವಿಕಲಚೇತನರಿಗೆ ಸಿಗುವ ಸವಲತ್ತುಗಳು. ಅವರಿಗೆಂದೇ ವಿಶೇಷವಾಗಿ ನಿರ್ಮಿಸಲಾದ ರ್‍ಯಾಂಪ್‌ಗಳು ಎಲ್ಲೆಡೆಯೂ ಕಾಣಸಿಗುತ್ತವೆ. ಪ್ರತಿ ಬಸ್ ನಲ್ಲಿ ಇಬ್ಬರು ಗಾಲಿ ಕುರ್ಚಿ ಸವಾರರನ್ನು ಕರೆದುಕೊಂಡು ಹೋಗೋ ಅವಕಾಶ ಇದೆ. ಬಸ್‌ಗಳಲ್ಲಿ ಅವಕ್ಕೆಂದೇ ವಿಶೇಷವಾದ ಲಾಕ್ ಗಳು ಇವೆ. ಬಸ್‌ನ ಮುಂಭಾಗದಲ್ಲಿ ಇರೋ ಹೈಡ್ರಾಲಿಕ್ ನ ಸಹಾಯದಿಂದ ಬಸ್ ಅನ್ನು ಕೆಳಗೆ ಕುಗ್ಗಿಸಬಹುದು !! ಸಣ್ಣ ಮಕ್ಕಳಿಗೆ, ವಯಸ್ಸಾದವರಿಗೆ, ವಿಕಲಚೇತನರಿಗೆ ಇದರಿಂದ ಆಗೋ ಅನುಕೂಲಾನ ನಾನು ಕಣ್ಣಾರೆ ನೋಡಿದ್ದೀನಿ.

* ಇಷ್ಟೇ ಅಲ್ಲ .. ನಮ್ಮ ಕಲ್ಪನೆಗೂ ನಿಲುಕದ ಮಹತ್ತರವಾದ ಯೋಜನೆಯೊಂದು ಇಲ್ಲಿದೆ ( ನನ್ನ ದೃಷ್ಟಿಯಲ್ಲಿ ಇದೊಂದು ರೀತಿಯ ಪುಣ್ಯದ ಕೆಲಸ !). ಬಸ್, ರೈಲ್ ನಿಲ್ದಾಣಗಳಿಗೆ ಪ್ರಯಾಣ ಮಾಡಲು ತೊಂದರೆ ಇರೋ ವಿಕಲಚೇತನರಿಗೆ, ವೃದ್ಧರಿಗೆ  ಔಟ್ರೀಚ್ ಎಂಬ ಸೇವೆ ಇದೆ. ಕರೆ ಮಾಡಿದ್ರೆ ಸಾಕು, ಮನೆ ಬಾಗಿಲಿಗೆ ಬಂದು ಸಮೀಪದ ರೈಲ್,ಬಸ್ ನಿಲ್ದಾಣದವರೆಗೆ ಅತ್ಯಂತ ಕಡಿಮೆ ದರದಲ್ಲಿ ಕಾರ್ ಡ್ರಾಪ್ !! ನಂಬೋಕ್ಕೆ ಕಷ್ಟ ಆದರೂ ನಂಬಿ. ಕೆಳಗಿನ ಚಿತ್ರದ ಮೇಲೆ ಹಾಗೆ ಕಣ್ಣು ಹಾಯಿಸಿ.


... ( ಮುಂದುವರೆಯುವುದು )
ಚಿತ್ರ ಕೃಪೆ ( Images from ) : Google Images & www.vta.org

Thursday, September 30, 2010

ನಮ್ಮ ಬೆಂಗಳೂರಿನಲ್ಲೂ ಇಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದ್ರೆ ? ( ಭಾಗ - ೧ )

ಕಳೆದ ೮ ತಿಂಗಳಲ್ಲಿ ಅಮೇರಿಕದ ಬೇ ಏರಿಯಾ( ಕ್ಯಾಲಿಫೋರ್ನೀಯ ರಾಜ್ಯದ ಸ್ಯಾನ್ ಫ್ರಾನ್ಸಿಸ್ಕೊ ನಗರದ ಸಮೀಪ ಇರೋ, ಪೆಸಿಫಿಕ್ ಸಾಗರ ಒಳ ನುಗ್ಗಿರೋ ಪ್ರದೇಶದ ಸುತ್ತ ಇರೋ ಸ್ಥಳಗಳು...ಅಬ್ಬಾ!) ದಲ್ಲಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು ಅಂದ್ರೆ ಇಲ್ಲಿನ ಜನಸ್ನೇಹಿ ಹಾಗೂ ಅಚ್ಚುಕಟ್ಟಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ.

ನಾನಿರುವ ಸನ್ನೀವೇಲ್, ಪಕ್ಕದ ಸ್ಯಾನ್ ಹೋಸೇ, ಕೂಪರ್ಟೀನೊ, ಮೌಂಟನ್ ವ್ಯೂ, ಪ್ಯಾಲೊ ಆಲ್ಟೊ ಇತ್ಯಾದಿ ನಗರಗಳಲ್ಲಿ ಈ ಸೇವೆ ನೀಡುತ್ತಿರುವ ಸಂಸ್ಥೆ  VTA (ವ್ಯಾಲೀ ಟ್ರ್ಯಾನ್ಸ್ಪೋರ್ಟೇಶನ್ ಅತಾರಿಟೀ ಅನ್ನೋದರ ಸಂಕ್ಷಿಪ್ತ. ಹೆಚ್ಚಿನ ಮಾಹಿತಿಗೆ www.vta.org ನೋಡಿ ). ಬಸ್ ನ ಜೊತೆಗೆ ಲೈಟ್ ರೈಲ್, ಕಮ್ಯುನಿಟಿ ಸೇವೆ, ಎಕ್ಸ್ಪ್ರೆಸ್ ಸೇವೆ, ರ್‍ಯಾಪಿಡ್, ಪ್ರಾದೇಶಿಕ ಸಾರಿಗೆ ಇತ್ಯಾದಿ ತರಹದ ಸೇವೆಗಳನ್ನು ಇದು ಜನರಿಗೆ ನೀಡುತ್ತಾ ಇದೆ. ಬಸ್ ಮತ್ತು ಲೈಟ್ ರೈಲ್ ( ಹಗುರ ರೈಲ್ ಅಂತ ಬೇಕಿದ್ರೆ ಅನ್ನೋಣ :) ಇದು ಹೇಗಿರತ್ತೆ ಅನ್ನೋದಕ್ಕೆ  ಕೆಳಗಿನ ಚಿತ್ರ ನೋಡಿ) ಬಗ್ಗೆ ನನಗೆ ಹೆಚ್ಚು ಮಾಹಿತಿ ಇರೋದ್ರಿಂದ ಅದರ ಬಗ್ಗೆ ಮಾತ್ರ ಹೇಳ್ತೇನೆ.

ಏನೇನು ವಿಶೇಷಗಳು ?

* ಬಸ್ ಮತ್ತು ರೈಲ್ ಸೇವೆಯನ್ನು ಗೂಗಲ್ ಮ್ಯಾಪ್ ಜೊತೆ ಜೋಡಿಸಿದ್ದಾರೆ (Integrate). ಹಾಗಾಗಿ ಮನೆ ಅಲ್ಲಿ ಕುಳಿತೇ ಗೂಗಲ್ ಮ್ಯಾಪ್ ಸಹಾಯದಿಂದ ಇರೋ ಜಾಗದಿಂದ ಹೋಗುವ ಜಾಗಕ್ಕೆ ಇರುವ ಬಸ್ / ರೈಲ್ ಸೇವೆ, ಮಾರ್ಗಗಳು, ಟಿಕೆಟ್ ದರ, ತಗಲುವ ಸಮಯ ಇತ್ಯಾದಿ ವಿವರಗಳನ್ನು ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳಬಹುದು.

* ಬೇಡಿಕೆ ಮತ್ತು ಪೂರೈಕೆಯಲ್ಲಿ ಸಮತೋಲನ ಇದೆ.ಅಂದ್ರೆ ಯಾವ ಯಾವ ಮಾರ್ಗದಲ್ಲಿ ತುಂಬಾ ಜನ ಓಡಾಡ್ತಾರೋ ಅಲ್ಲಿ ಹೆಚ್ಚು ಹೆಚ್ಚು ಬಸ್, ರೈಲ್ ಸೇವೆ ಇದೆ. ನಿರಂತರವಾಗಿ ಸೇವೆ ಲಭ್ಯ ಇರೋದ್ರಿಂದ ಹೆಚ್ಚು ಕಾಯೋ ಕಷ್ಟಾನೂ ಇಲ್ಲ.

* ಬಸ್, ರೈಲ್ ಸೇವೆಗಳ ಸಮಯ ಪಾಲನೆ ಕಂಡ್ರೆ ನೀವು ದಂಗಾಗದೆ ಇರದೆ ಸಾಧ್ಯಾನೆ ಇಲ್ಲ !..ಹೌದು ಅಷ್ಟರ ಮಟ್ಟಿಗೆ ಶಿಸ್ತಿನ ಸಿಪಾಯಿಗಳು ಇಲ್ಲಿನ ಬಸ್ ಚಾಲಕರು. (ಅಂದ್ಹಾಗೆ ಇಲ್ಲಿ ಕಂಡಕ್ಟರ್ ಅನ್ನೋ ಪರಿಕಲ್ಪನೆನೇ ಇಲ್ಲ !). ಬಸ್, ರೈಲುಗಳು ತಡವಾಗಿ ( ಅಂದ್ರೆ ೪-೫ ನಿಮಿಷ !) ಬರೋದು ಬಹಳ ಅಪರೂಪ.

* ಬಸ್ ಹತ್ತುತ್ತಿದ್ದ ಹಾಗೆ ಚಾಲಕರು ಹೈ, ಹೆಲ್ಲೋ, ಗುಡ್ ಮಾರ್ನಿಂಗ್ ಹೇಳಿ ಸ್ವಾಗತಿಸುತ್ತಾರೆ. ಎಲ್ಲಿಗೆ ಅಂತ ಹೇಳಿದ್ರೆ ಟಿಕೆಟ್ಟೋ ಅಥವಾ ಪಾಸು ಪಡೆಯೋದು ಒಳ್ಳೆಯದೋ ಅಂತಾನೂ ಹೇಳ್ತಾರೆ.

... ( ಮುಂದುವರೆಯುವುದು )
ಚಿತ್ರ ಕೃಪೆ ( Images from) : Google Images & www.vta.org