WELCOME !

WELCOME ! No images or posts on this blog may be copied or reproduced without owners permission.
Showing posts with label house. Show all posts
Showing posts with label house. Show all posts

Saturday, October 16, 2010

ಮನೆಗೆಲಸವೆಂಬ ಮಹತ್ಕಾರ್ಯ !!

" ದೋಸೆ ಅಂದ್ರೆ ಎಲ್ರಿಗೂ ಇಷ್ಟ .. ಸರಿ ಹಾಗಿದ್ರೆ ಇವತ್ತು ಅಕ್ಕಿ ನೆನಸಿ ನಾಳೆ ಹಿಟ್ಟನ್ನು ರುಬ್ಬಿ ನಾಡಿದ್ದು ತಿಂಡಿ ಗೆ ದೋಸೆ ಮಾಡಿದ್ರಾಯ್ತು. ಕಿಟಕಿ, ಅಟ್ಟ ಕ್ಲೀನ್ ಮಾಡಿ ೨-೩ ತಿಂಗಳು ಆಯ್ತು ಸರಿ ನಾಳೆ ಮನೆ ಕೆಲಸ ಬೇಗ ಮುಗ್ಸಿ ಅದನ್ನು ಮಾಡ್ತೀನಿ.  ಈ ಶನಿವಾರ ಕೈ ತೋಟದಲ್ಲಿ ಸ್ವಲ್ಪ ಸಮಯ ಕಳೀಬೇಕು ಹೊಸ ೩-೪ ಗಿಡಗಳನ್ನು ಹಾಕ್ಬೇಕು .. ಮಳೆಗಾಲ ಹತ್ರ ಬರ್ತಾ ಇದೆ ತಡ ಮಾಡೋದು ಬೇಡ. ಮುಂದಿನ ವಾರ ಹಬ್ಬಕ್ಕೆ ಮನೆಗೆ ಜನ ಬರ್ತಾರೆ .. ಕಿರಾಣಿ ಸಾಮಾನುಗಳನ್ನು ಆದಷ್ಟು ಬೇಗ
ತರಬೇಕು."

ಈ ತರಹ ಹೇಳ್ತಾ ಹೋದ್ರೆ ಕೊನೆನೇ ಇರೋದಿಲ್ಲ ಅನ್ಸತ್ತೆ . ಇದು ದಿನ ನಿತ್ಯ ನಮ್ಮ ಅಮ್ಮಂದಿರು , ಇಡೀ ಪ್ರಪಂಚವೇ ಮೆಚ್ಚೋ ನಮ್ಮ ಕುಟುಂಬ ವ್ಯವಸ್ಥೆಯ ನೊಗ ಹೊರೋ ನಮ್ಮ ಗೃಹಿಣಿಯರು ಹೇಗೆ ಯೋಚನೆ ಮಾಡ್ತಾ ಇರ್ತಾರೆ ಅನ್ನೋದರ ಒಂದು ಸ್ಯಾಂಪಲ್ಲು. ನನ್ನ ಪ್ರಕಾರ ಜಗತ್ತಿನಲ್ಲಿ ಯಾವುದೇ ಸಂಬಳ, ಪ್ರಮೋಷನ್ ನ ಅಪೇಕ್ಷೆ ಇಲ್ಲದೇ ಇರೋ ಒಂದ್ ಕೆಲಸ ಅಂದ್ರೆ ಈ ಮನೆಗೆಲಸವೇ !  ಆದ್ರೂ ನೋಡಿ ಒಂದು ದಿನಾನೂ ಆಯಾಸ ಇಲ್ಲದೇ, ಪ್ರೀತಿ, ಕಾಳಜಿಗಳು ಕೊಂಚವೂ ಕಮ್ಮಿ ಆಗದಂತೆ ವರ್ಷದ ೩೬೫ ದಿನವೂ ( ಭಾನುವಾರ, ಸರ್ಕಾರಿ ರಜಗಳು ಎಲ್ಲಿರತ್ವೆ ? ) ನಿರಂತರವಾಗಿ ಸಂಸಾರದ ರಥ ನಡೆಸೋದ್ರಲ್ಲಿ ನಮ್ಮ ಅಮ್ಮಂದಿರು / ಗೃಹಿಣಿಯರು ಯಾವತ್ತೂ ಹಿಂದೆ ಬಿದ್ದೋವ್ರಲ್ಲ. ಆ ತ್ಯಾಗ, ಪ್ರೀತಿ ತುಂಬಿದ ಸೇವೆಗೆ ಕೃತಜ್ಞತೆ ಹೇಗೆ ಸಲ್ಲಿಸೋದಪ್ಪ ಅಂತ ಯೋಚಿಸ್ತಾ ಇದ್ದ ಹಾಗೆ ಮನಸ್ಸು ಹಾಗೆ ಸೆಂಟಿಮೆಂಟಲ್ ಆಗ್ಬಿಡತ್ತೆ...
"ಹೋಗ್ಲಿ ಬಿಟ್ ಹಾಕ್" ಮಾಡ್ಲೆಬೇಕಾಗುತ್ತೆ.


ಈ ಐಟಿ , ಬಿಟಿ ಇತರೆ ಬಹುರಾಷ್ಟ್ರೀಯ ಕಂಪನಿಗಳು ನಮ್ಮ್ ದೇಶಕ್ಕೆ ಬಂದು ಬೇರೆ ಎನ್ ಆಯ್ತೋ ಗೊತ್ತಿಲ್ಲ ಆದ್ರೆ ನಮ್ಮ ಹುಡುಗ್ರು ಸ್ವಲ್ಪ ಮಟ್ಟಿಗಾದ್ರೂ ಮನೆ ಕೆಲಸ ಕಲಿತುಕೊಳ್ಳೋ ಹಾಗೆ ಆಯ್ತು ( ಪಟ್ಟಣದಲ್ಲಿ ಅಮ್ಮ ಎಲ್ಲಿರ್ತಾಳೆ ? ಕೆಲಸದವಳು ಏನೇ ಅಂದ್ರೂ ಮಾಡೋದು ಅಷ್ಟಕ್ಕಷ್ಟೇ. ) ಕಲಿತುಕೊಳ್ಳೋ ಜೊತೆಗೆ ಮನೆಗೆಲಸಕ್ಕೂ ಸ್ವಲ್ಪ ಗೌರವ ಕೊಡೋಕ್ಕೆ ಶುರು ಮಾಡಿದ್ರು. ಬೆವರು ಹರಿಸೋದು ಅಂದ್ರೆ ಸುಮ್ನೇನಾ ? ವಿದ್ಯೆ, ಬುದ್ದಿ ಜೊತೆಗೆ ಒಳ್ಳೇ ಕೆಲಸಗಳಲ್ಲಿರುವ ಇಂದಿನ ಹುಡುಗೀರನ್ನು ನೋಡ್ಕೊಂಡು ಹುಡುಗ್ರೂ ಎರಡೂ ಕ್ಷೇತ್ರಗಳಲ್ಲಿ ತಮ್ಮ ಅರ್ಹತೆಯನ್ನು ತೋರ್‌ಸ್ಕೊಳ್ಳಲೇಬೇಕು. ಒಂದ್ ರೀತಿಯಲ್ಲಿ ತಮ್ಮ ಕಾಲ ಮೇಲೆ ತಾವೇ ಸಂಪೂರ್ಣವಾಗಿ ನಿಂತ್ಕೋಬೇಕು ಅನ್ನೋ ಪರಿಸ್ಥಿತಿನೂ ಇದೆ...ಹೌದು ಕಾಲ ಬದಲಾಗ್ತ ಇದೆ , ಜನ ಬದಲಾಗ್ತ ಇದ್ದಾರೆ , "ಹೌಸ್ ವೈಫ್" ಹೋಗಿ "ಹೋಮ್ ಮೇಕರ್"  ಪದದ ಬಳಕೆ ಹೆಚ್ಚಾಗಿದೆ... ಹಾಗೆಯೇ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾದ ಈ ಮನೆಗೆಲಸಕ್ಕೆ + ಮನೆಗೆಲಸ ಮಾಡೋ ಜನರ ಬಗ್ಗೆ ಸ್ವಲ್ಪ ಮರ್ಯಾದೇನೂ ಜಾಸ್ತಿ ಆಗ್ಲಿ .. ಏನ್ ಅಂತೀರಾ ?

ಮುಂದಿನ ಸಲ "ಅಡಿಗೆ, ಪಾತ್ರೆ , ಬಟ್ಟೆ , ನೆಲ-ಕಸ ಇಷ್ಟು ಮಾಡಿದ್ರೆ ಆಗ್ ಹೋಯ್ತು ಮನೆ ಕೆಲ್ಸಾ" ಅನ್ನೋ ಮುಂಚೆ ಸ್ವಲ್ಪ 
ಯೋಚಿಸ್ತೀರಾ ?

ಪಿಸು : ಅಂದ ಹಾಗೆ ಯಾಕೆ ಇಷ್ಟೆಲ್ಲಾ ಪುರಾಣ , ನೀತಿ ಪಾಠ ಅಂತೀರಾ ? ಈಗ ತಾನೇ ವಾಷ್ ಬೇಸಿನ್ ತುಂಬಾ 
ತುಂಬ್ಕೊಂಡಿದ್ದ ಪಾತ್ರೆಗಳನ್ನು ತೊಳೆದು ಬರ್ತಾ ಇದ್ದೀನಿ...ಕಷ್ಟ, ಸುಖ ನಿಮ್ಮ್ ಜೊತೆ ಹಂಚ್ಕೊಳ್ಳೋದು ಬೇಡ್ವೆ ?? :)
Image From: Google Images