WELCOME !

WELCOME ! No images or posts on this blog may be copied or reproduced without owners permission.

Friday, November 5, 2010

ನಮ್ಮ ಕನ್ನಡಾನ ನಾವೇ ಬಿಟ್ರೆ ??

"ಕನ್ನಡದಲ್ಲಿ ಏನಾದ್ರೂ ಓದಿ ತುಂಬಾ ವರ್ಷ ಆಯ್ತು", "ಅದ್ ಹೇಗೋ ಕನ್ನಡದಲ್ಲಿ ಇಗ್ಲೂ ಬರೀತೀಯ ?" , "ಕರ್ನಾಟಕದಲ್ಲಿ ಇದ್ರೆ ಏನಂತೆ ? ಸಿಬಿಎಸ್ಸಿ ಅಂದ್ರೆ ಮುಗೀತು ಕನ್ನಡ ಕಲೀಲೆ ಬೇಕು ಅಂತ ಏನಿಲ್ಲ !" , " ಕನ್ನಡ ಓದೋದು , ಬರೆಯೋದು ಹಾಗಿರಲಿ ಸದ್ಯ ನನ್ ಮಗ ಅಲ್ಪ ಸ್ವಲ್ಪ ಆದ್ರೂ ಕನ್ನಡದಲ್ಲಿ ಮಾತಾಡಿದ್ರೆ ಸಾಕು" ..... ಹೀಗೆ ( ಕೆಲ/ಹಲ ವು) ಕನ್ನಡಿಗರ ಕನ್ನಡದ ಹಣೆಬರಹವನ್ನು, ಪಕ್ಕಾ ಕನ್ನಡಿಗ ಪೋಷಕರಿಗೀರೋ ಕನ್ನಡ ಕಾಳಜಿಯನ್ನೂ , ಕನ್ನಡ ಯಾಕೆ ಬೇಕು ಅನ್ನೋ ಅಸಡ್ಡೆಯನ್ನೂ ನೋಡಿ,ಕೇಳಿ ನನಗೆ ಸಾಕಾಗಿಹೋಗಿದೆ .... ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸೋದು ಹಾಗಿರಲಿ ಕನಿಷ್ಟ ಕನ್ನಡವನ್ನು ಅವರು ಒಂದು ವಿಷಯವನ್ನಾಗಿಯಾದರೂ ಓದಲಿ ಅನ್ನೋ ಕಳಕಳಿ ಇಲ್ಲದೇ ಇರೋದನ್ನು ನೋಡಿದಾಗ ನಾಚಿಕೆಯಾಗುತ್ತೆ, ಬೇಜಾರಾಗುತ್ತೆ, ಕೋಪವೂ ಧಂಡಿಯಾಗಿ ಉಕ್ಕಿ ಬರತ್ತೆ !

ಒಂದ್ ಪ್ರಶ್ನೆ ನನ್ನನ್ನು ಬಹಳ ಕಾಡ್ತಾ ಇದೆ. ಅಲ್ಲ ನಮ್ ಕನ್ನಡಿಗರಿಗೆ ... 'ಕನ್ನಡ'  ಕಾಟಚಾರವಾದದ್ದು ಯಾವಾಗ ? ನಮ್ಮನ್ನು ಬೆಳಸಿದ ಭಾಷೆಯೇ ನಮಗೆ ಹೊರೆಯಾದದ್ದು ಯಾವಾಗ ?  "ಸ್ವಲ್ಪ ಅಡ್ಜಸ್ಟ್ ಮಾಡ್‌ಕೊಳ್ಳಿ" ಇದ್ದದ್ದು "ತುಂಬಾ ಅಡ್ಜಸ್ಟ್‌ಮೆಂಟ್" ಆಗ್ ಹೋಗಿದೆಯಲ್ಲಾ !  "ಕನ್ನಡಾನ ನಂಬ್ಕೊಂಡ್ರೆ ಬದ್ಕೊಕ್ಕೇ ಆಗುತ್ತಾ" ಅನ್ನೋವ್ರಿಗೆ  ನನ್ನ ಸಹಾನುಭೂತಿ ಬಿಟ್ರೆ ಬೇರೇನನ್ನೂ ಕೊಡಲಾರೆ. ಯಾಕಂದ್ರೆ ಬುದ್ಧಿ ಮಾತು ಹೇಳೋ ಅಷ್ಟು ದೊಡ್ಡೋವ್ನ್ ಅಲ್ಲ ನಾನು! ಅಥವಾ ನಾಲ್ಕು ಮಾತು ಹೇಳಿದ್ರೆ ಜನ ಬದಲಾಗಿಬಿಡ್ತಾರೆ ಅನ್ನೋ ಭರವಸೆಯನ್ನೂ ಇಟ್ಟ್ಕೊನ್ಡಿಲ್ಲ ನಾನು. ಬಲವಂತವಾಗಿ ಕನ್ನಡ ಹೇರೋದೂ ನನ್ನ ಮೊದಲ ಪ್ರಾಶಸ್ತ್ಯ ಅಲ್ಲ ! ಆತ್ಮ ಸಾಕ್ಷಿ ಇರೋ ಪ್ರತಿಯೊಬ್ಬ ಕನ್ನಡಿಗನೂ, ಕನ್ನಡದ ನೆಲದಲ್ಲಿರೋ ಕನ್ನಡೇತರರೂ ತಾವಾಗಿ ಮುಂದೆ ಬಂದು ಕನ್ನಡವನ್ನು ಬಳಸಿ, ಬೆಳಸಿ, ಪೋಷಿಸಬೇಕೆಂಬುದು ನನ್ನಾಸೆ !


ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳಿರಬೇಕು ಅಂತ ಕಾನೂನು (ಅಷ್ಟಕ್ಕೂ ಬೇರೆ ಭಾಷೆ ಬೇಡ ಅಂತ ಕಾನೂನು ಹೇಳೋಲ್ಲ...ಕನ್ನಡಕ್ಕೆ ಪ್ರಾಶಸ್ತ್ಯ ಕೊಡಿ ಅನತ್ತೆ ಅಷ್ಟೇ! )  ಇದ್ದರೂ ಅದಕ್ಕೆ ಕ್ಯಾರೇ ಅನ್ನದ, ಅದೇನ್ ಮಾಡ್ತೀರೋ ನೋಡೋಣ ಅನ್ನೋ ಕೆಲ ಜನರ ಭಂಡತನಕ್ಕೆ ಏನನ್ನೋಣ ? ಕನ್ನಡಿಗರಿಬ್ಬರ ನಡುವೆ ಇಂಗ್ಲೀಷ್ ಮಾತುಕತೆಯ ಭಾಷೆಯಾಗಿ ಬಳಕೆಯಾಗ್ತಾ ಇದ್ರೆ..ಅದು ಕನ್ನಡದ ಕೊಲೆಯೇ ಅಲ್ಲವೇ ? ನಮ್ಮ ಬೆಂಗಳೂರಿನ ಮಾಲ್, ಚಿತ್ರಮಂದಿರ, ವಿಮಾನ ನಿಲ್ದಾಣ, ಬ್ರಿಗೇಡ್, ಎಂಜೀ ರಸ್ತೆಗಳಲ್ಲಿ ಕನ್ನಡ ಬಳಸೋಕ್ಕೆ ಏಕಾಏಕಿ ಸಂಕೋಚ ಯಾತಕ್ಕೆ ?? ಹಳೆಗನ್ನಡ ಎಂಬುದು ನಮ್ಮ ತಂದೆ ತಾಯಿಗಳ ಕಾಲಕ್ಕೇ ಹೊರಟು ಹೋಗಿತ್ತು..ಬದುಕಿ ಉಳಿದಿರೋ.... ಈಗಿರೋ ಕನ್ನಡವನ್ನಾದ್ರೂ ನಮ್ಮಿಂದ ಹೆಚ್ಚಾಗಿ ಬಳಸೋಕ್ಕೆ ಆಗೋಲ್ವೇ ?? ಹಾಗೆ ನೋಡಿದ್ರೆ ಕನ್ನಡಿಗರು ಪರಭಾಷಾ ವಿರೋಧಿಗಳಲ್ಲ, ಕಾಲು ಕೆರೆದುಕೊಂಡು ಸುಮ್ಮನೇ ಕ್ಯಾತೇ ತೆಗೆಯುವವರೂ ಅಲ್ಲ, ಹಿಂಸೆ, ಪ್ರತಿಭಟನೆಗಳ ಆರಾಧಕರೂ ಅಲ್ಲ ... ಹಾಗಿರಬೇಕಾದ್ರೆ ಕನ್ನಡ, ಕನ್ನಡತನದಿಂದ ನಾವೇಕೆ ದೂರ ಸರೀತಾ ಇದ್ದೀವಿ ?? 

ನಮ್ಮ ಕಣ್ಣ ಮುಂದೇನೇ ಶ್ರೀಮಂತ ಹಾಗೂ ಹಲವಾರು ಭಾಷೆಗಳಿಗೆ ಮೂಲವಾದ ಸಂಸ್ಕೃತಕ್ಕೆ ಬಂದಿರೋ ಸ್ಥಿತಿನಾ ನೋಡ್ತಾ ಇದ್ದೀವಿ ....ನಮ್ಮ ಕನ್ನಡಾನೂ ಹಾಗೆ ಆಗಬಾರದು ಅಂದ್ರೆ ರಾಜ್ಯೋತ್ಸವ ಅನ್ನೋದು ನವೆಂಬರ್ ಮಾಸಕ್ಕೆ ಸೀಮಿತವಾಗದೆ, ಕನ್ನಡ ಬಳಕೆ, ಕನ್ನಡದ ಬಗೆಗಿನ ಕಾಳಜಿಯ ಮೂಲಕ ನಿತ್ಯೋತ್ಸವ ಆಗಬೇಕು...ಆಗಲೇ ನಮ್ಮ ಕನ್ನಡ ಉಳಿದೀತೂ, ಕೊಂಚ ಬೆಳೆದೀತೂ... ! 

ಒಪ್ಪ್ಕೋತೀರಾ ??