WELCOME !

WELCOME ! No images or posts on this blog may be copied or reproduced without owners permission.

Saturday, October 23, 2010

ಹತ್ತಿ ಉರಿತಾ ಇರೋ ದೇಶ ....ತಣ್ಣಗೆ ಕೂತ್ಕೊಂಡು ತಮಾಷೆ ನೋಡೋ ಜನ.

"ನಾವು ( ಅಂದ್ರೆ ಭಾರತೀಯರು ) ಯಾಕೆ ಹೀಗೆ ?" ಅನ್ನೋ ಪ್ರಶ್ನೆನಾ ನಾನು ಪದೇ ಪದೇ ನನಗೆ ನಾನೇ ಕೇಳ್ಕೊಳ್ತಾ ಇರ್ತೀನಿ. ಸ್ವಾತಂತ್ರ್ಯ ಸಿಕ್ಕಿ ೬೦ ವರ್ಷಗಳಾದರೂ "ಸಧ್ೃಡ ಹಾಗೂ ಶಕ್ತಿಶಾಲಿ ಭಾರತ" ಅನ್ನೋ ಒಂದು ರಾಷ್ಟ್ರದ ಕಲ್ಪನೆಯಿಂದ ನಮ್ಮನ್ನು ನಾವು ಯಾಕೆ ದೂರ ಇಟ್ಕೊಂಡ್ ಇದ್ದೀವಿ ಅನ್ನೋ ಪ್ರಶ್ನೆಗೆ ನನ್ನ ಬಳಿ ಸರಿಯಾದ ಉತ್ತರ ಇನ್ನೂ ಇಲ್ಲ. 

ಕಳ್ಳತನ, ಸುಲಿಗೆ, ದರೋಡೆ , ಅತ್ಯಾಚಾರ, ಭ್ರಷ್ಟಾಚಾರ ಪ್ರಕರಣಗಳು ಹಾಗಿರಲಿ ದೇಶದ ಐಕ್ಯತೆ ಹಾಗೂ ಸಮಗ್ರತೆಯ ವಿಷಯದಲ್ಲೂ ಗಂಭೀರತೆಯನ್ನು ತೋರಿಸೋವ್ರಲ್ಲ ನಾವು !  ಶತ್ರು ಪಡೆಗಳು ಸರ್ವ ಮಾರ್ಗದಲ್ಲೂ ನಮ್ಮ ಮೇಲೆ ಕತ್ತಿ 
ಮಸೆಯುತ್ತಿದ್ದರೆ ಹೇಡಿಗಳಂತೆ ಕೈಕಟ್ಟಿ ಕುಳಿತಿರೋವ್ರು ನಾವು. ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿ , ಅವರ ಮೇಲಿನ ಆರೋಪ ಸಾಬೀತಾಗಿ , ಶಿಕ್ಷೆಗೆ ಗುರಿಯಾಗಿರುವವರನ್ನು ನೇಣುಗಂಬಕ್ಕೆ ಏರಿಸಬೇಕೋ ಬೇಡವೋ ಎಂದು ಚಿಂತಿಸುವ ಅಸಹಾಯಕರು ನಾವು !  ನೋಡಿ .. ನಮ್ಮ ಅಮಾಯಕ ನಾಗರೀಕರು, ಸೈನಿಕರು , ಪೊಲೀಸರು ಹತ್ಯೆಯಾದಾಗ ಎಲ್ಲಿಯೂ ಕಾಣಸಿಗದ ಮಾನವ ಹಕ್ಕುಗಳ ಪ್ರತಿಪಾದಕರು ಅದ್ ಹೇಗೋ ಕೈದಿಗಳಿಗೆ, ನಕ್ಸಲರಿಗೆ , ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ ಉಗ್ರಗಾಮಿಗಳಿಗೆ ಸೂಜಿ ಚುಚ್ಚಿದರೂ ಬೊಬ್ಬೇ ಹಾಕುತ್ತಾರೆ . ಹೆಚ್ಚಾಗಿ ವಿದೇಶಿ ಮೂಲದ ಹಣದಿಂದ ನಡೀತಾ ಇರೋ ನಮ್ಮ ಮಾಧ್ಯಮಗಳು ( ಅದರಲ್ಲೂ ಆಂಗ್ಲ ಟಿವಿ ನ್ಯೂಸ್ ಚಾನೆಲ್‌ಗಳು ) ಇಂತಹವರಿಗೆ ಪುಕ್ಕಟ್ಟೆ ಪ್ರಚಾರವನ್ನೂ ನೀಡುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯ , ವಾಕ್ ಸ್ವಾತಂತ್ರ್ಯ ಎಂದು ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ಸಮರ್ಥಿಸಿ , ದೇಶದ ಹಿತಾಸಕ್ತಿಯ ಪರವಾಗಿ ಮಾತಾಡೋ ಜನರನ್ನೇ ಖಳ ನಾಯಕರಂತೆ ಪ್ರತಿಬಿಂಬಿಸಿಬಿಡುತ್ತವೆ. ಆದರೂ ಇದನೆಲ್ಲಾ ಬೇಜಾರಿಲ್ಲದೇ ಸಹಿಸಿಕೊಳ್ಳೋವ್ರು ನಾವು ! 


ಹೀಗೆ ಮೊನ್ನೆ ದೆಹಲಿಯಲ್ಲಿ "ಸ್ವಾತಂತ್ರ್ಯವೊಂದೇ ಉತ್ತರ" ["Azadi is the only Solution"] ಎಂಬ ತಲೆ ಬರಹದಡಿ ನಮ್ಮ ದೇಶದ ದೊಡ್ಡ ದೊಡ್ಡ ತಲೆ ಹರಟೆಗಳು ಸಮಾವೇಷವೊಂದನ್ನು ಮಾಡಿದ್ದಾರೆ. ಪ್ರತ್ಯೇಕ ಕಾಶ್ಮೀರ ರಾಷ್ಟ್ರದ ಕನಸು ಕಾಣೋ ಹುರ್ರಿಯತ್ ಕಾನ್ಫರೆನ್ಸ್ , ಖಲಿಸ್ತಾನ್ ಬೆಂಬಲಿಗರು , ನಕ್ಸಲರ ಜೊತೆಯಲ್ಲಿ ಗುರುತಿಸಿಕೊಳ್ಳುವ ಹಾಗೂ ಕೆಲವರಿಂದ ಬುದ್ಧಿ ಜೀವಿಗಳೆಂದು ಕರೆಸಿಕೊಳ್ಳೋ ಜನರು ಇದರಲ್ಲಿ ಭಾಗವಹಿಸಿದ್ದಾರೆ. ಈ ಮೇಧಾವಿಗಳು, ಸಮಾವೇಶದಲ್ಲಿ ಭಾರತದ ಸಂವಿಧಾನವನ್ನು ಸಾರ ಸಗಟಾಗಿ ತಿರಸ್ಕರಿಸಿದ್ದಾರೆ. ಸ್ವಾತಂತ್ರ್ಯ ಪಡೆಯೋ ವಿಚಾರದಲ್ಲಿ ರಾಜಿಯೇ ಇಲ್ಲ ಎಂದು ಘೋಷಿಸಿದ್ದಾರೆ. ಕಾಶ್ಮೀರದಲ್ಲಿ ಪಾಕಿ ಬಾವುಟ ಹಾರಿಸಿದ್ದು, ತ್ರಿವರ್ಣವನ್ನು ಸುಟ್ಟಿದ್ದು, ಸಶಸ್ತ್ರ ಪಡೆಗಳ ಮೇಲೆ ಕಲ್ಲು ತೂರಿದ್ದು, ಭಾನುವಾರದ ಬದಲಿಗೆ ಶುಕ್ರವಾರವನ್ನು ರಜೆಯಾನ್ನಾಗಿ ಘೋಷಿಸಿದ್ದು ... ಇತ್ಯಾದಿಗಳು ಯಾವ ರೀತಿಯಲ್ಲೂ ತಪ್ಪೇ ಅಲ್ಲ ಎಂಬ ಸಂದೇಶ ನೀಡಿ ದರ್ಪ ಮೆರೆದಿದ್ದಾರೆ. ಕೆಲ ಕಾಲದಿಂದ  ಕೆಲಸವಿಲ್ಲದೇ ಮತಿ ಭ್ರಮಣೆಗೊಳಗಾಗಿರೋ , ನಕ್ಸಲರನ್ನು ತನ್ನ ಆರಾಧ್ಯ ದೈವರಂತೆ ಕಾಣೋ ಅರುಂಧತಿ ರಾಯ್ ಅಂತಹ ಜನರೂ ಈ ದೇಶವಿರೋಧಿ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಬೆಂಬಲ ಹಾಗೂ ಅನುಕಂಪವನ್ನು ಧಾರಾಳವಾಗಿ ನೀಡಿದ್ದಾರೆ. 

ಇಷ್ಟೆಲ್ಲಾ ನಮ್ಮ ಕೇಂದ್ರ ಗೃಹ ಸಚಿವಾಲಯ ಹಾಗೂ ಸಂಸತ್ತಿನ ಬಳಿಯೇ ನಡೆದಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಕಮಕ್ ಕಿಮಕ್ ಅನ್ನದೇ ಬಾಯ್ಮುಚ್ಚಿ ಕುಳಿತಿವೆ. ಇನ್ನು ನಾವೋ...ಹೇಳೋದೇ ಬೇಡ...ಎಂದಿನಂತೆ ನನ್ನ ಕೆಲಸ, ನನ್ನ ಸಂಬಳ, ನನ್ನ ಮನೆ, ಹೆಂಡತಿ, ಮಕ್ಕಳು ಎಂಬ ಸ್ವಯಂ ಕೇಂದ್ರೀಕೃತ ವಿಷಯಗಳಲ್ಲೇ ಪುರುಸೊತ್ತಿಲ್ಲ...ದೇಶ ಯಾವೋನ್ಗೆ ಬೇಕು ಅನ್ನೋ ಆಲಸ್ಯ, ತಾತ್ಸಾರದ ಮನೋಭಾವ !

ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಸಹಸ್ರಾರು ತ್ಯಾಗ ಬಲಿದಾನಗಳಿವೆ ಎಂಬುದನ್ನು ನಾವೇಕೆ ಮರೆತ್ತಿದ್ದೆವೆ ? ಗಾಂಧೀಯಂತಹ ಶಾಂತಿ ಪ್ರಿಯನ ಜೊತೆ ಸುಭಾಷ್, ಸರ್ದಾರ್ ಪಟೇಲರಂತಹ ಉಕ್ಕಿನ ಮನುಷ್ಯರನ್ನೂನಮ್ಮ ದೇಶ ನಮಗೆ ನೀಡಿಲ್ಲವೇ ? ಹಾಗಾದ್ರೆ ಯಾಕೆ ಈ ಹೇಡಿತನ ? ಯಾಕೆ ಈ ನಪುಂಸಕತ್ವದ ಪ್ರದರ್ಶನ ? ನಾನು ಮೊದಲೇ ಹೇಳಿದಂತೆ ನನ್ನ ಬಳಿ ಇದಕ್ಕೆ ಸರಿಯಾದ ಉತ್ತರವಿಲ್ಲ !!

ನಮ್ಮ ಭಾರತ ಮಾತೆಗಾಗಿ, ಭಾರತದ ಏಳಿಗೆಗಾಗಿ, ಹಾಗೂ ಭಾರತೀಯರಿಗಾಗಿ, ರಾಜಕೀಯ ಇಚ್ಛಾಶಕ್ತಿ, ಶಕ್ತ ಪ್ರಧಾನಿ , ವೋಟ್ಬ್ಯಾಂಕ್ ರಹಿತ ರಾಜಕಾರಣ , ಎಲ್ಲಕ್ಕಿಂತ ಹೆಚ್ಚಾಗಿ ಎಚ್ಚೆತ್ತ ನಾಗರೀಕರು , ದೇಶಾಭಿಮಾನಿಗಳು ಎಂದಿಗಿಂತಲೂ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಬೇಕು..ಇಲ್ಲ ಅಂದ್ರೆ ನಮ್ಮ ಭಾರತ ಕೆಲವೇ ವರ್ಷಗಳಲ್ಲಿ ತುಂಡು ತುಂಡಾಗೋಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ ?

ತಮಾಷೆ ನೋಡಿದ್ದು ಸಾಕು ಇನ್ನು..ಮೈಚಳಿ ಬಿಟ್ಟು ನಿದ್ದೆಯಿಂದ ಎಳೋಣ್ವೆ ??
Image from : Google Images

Saturday, October 16, 2010

ಮನೆಗೆಲಸವೆಂಬ ಮಹತ್ಕಾರ್ಯ !!

" ದೋಸೆ ಅಂದ್ರೆ ಎಲ್ರಿಗೂ ಇಷ್ಟ .. ಸರಿ ಹಾಗಿದ್ರೆ ಇವತ್ತು ಅಕ್ಕಿ ನೆನಸಿ ನಾಳೆ ಹಿಟ್ಟನ್ನು ರುಬ್ಬಿ ನಾಡಿದ್ದು ತಿಂಡಿ ಗೆ ದೋಸೆ ಮಾಡಿದ್ರಾಯ್ತು. ಕಿಟಕಿ, ಅಟ್ಟ ಕ್ಲೀನ್ ಮಾಡಿ ೨-೩ ತಿಂಗಳು ಆಯ್ತು ಸರಿ ನಾಳೆ ಮನೆ ಕೆಲಸ ಬೇಗ ಮುಗ್ಸಿ ಅದನ್ನು ಮಾಡ್ತೀನಿ.  ಈ ಶನಿವಾರ ಕೈ ತೋಟದಲ್ಲಿ ಸ್ವಲ್ಪ ಸಮಯ ಕಳೀಬೇಕು ಹೊಸ ೩-೪ ಗಿಡಗಳನ್ನು ಹಾಕ್ಬೇಕು .. ಮಳೆಗಾಲ ಹತ್ರ ಬರ್ತಾ ಇದೆ ತಡ ಮಾಡೋದು ಬೇಡ. ಮುಂದಿನ ವಾರ ಹಬ್ಬಕ್ಕೆ ಮನೆಗೆ ಜನ ಬರ್ತಾರೆ .. ಕಿರಾಣಿ ಸಾಮಾನುಗಳನ್ನು ಆದಷ್ಟು ಬೇಗ
ತರಬೇಕು."

ಈ ತರಹ ಹೇಳ್ತಾ ಹೋದ್ರೆ ಕೊನೆನೇ ಇರೋದಿಲ್ಲ ಅನ್ಸತ್ತೆ . ಇದು ದಿನ ನಿತ್ಯ ನಮ್ಮ ಅಮ್ಮಂದಿರು , ಇಡೀ ಪ್ರಪಂಚವೇ ಮೆಚ್ಚೋ ನಮ್ಮ ಕುಟುಂಬ ವ್ಯವಸ್ಥೆಯ ನೊಗ ಹೊರೋ ನಮ್ಮ ಗೃಹಿಣಿಯರು ಹೇಗೆ ಯೋಚನೆ ಮಾಡ್ತಾ ಇರ್ತಾರೆ ಅನ್ನೋದರ ಒಂದು ಸ್ಯಾಂಪಲ್ಲು. ನನ್ನ ಪ್ರಕಾರ ಜಗತ್ತಿನಲ್ಲಿ ಯಾವುದೇ ಸಂಬಳ, ಪ್ರಮೋಷನ್ ನ ಅಪೇಕ್ಷೆ ಇಲ್ಲದೇ ಇರೋ ಒಂದ್ ಕೆಲಸ ಅಂದ್ರೆ ಈ ಮನೆಗೆಲಸವೇ !  ಆದ್ರೂ ನೋಡಿ ಒಂದು ದಿನಾನೂ ಆಯಾಸ ಇಲ್ಲದೇ, ಪ್ರೀತಿ, ಕಾಳಜಿಗಳು ಕೊಂಚವೂ ಕಮ್ಮಿ ಆಗದಂತೆ ವರ್ಷದ ೩೬೫ ದಿನವೂ ( ಭಾನುವಾರ, ಸರ್ಕಾರಿ ರಜಗಳು ಎಲ್ಲಿರತ್ವೆ ? ) ನಿರಂತರವಾಗಿ ಸಂಸಾರದ ರಥ ನಡೆಸೋದ್ರಲ್ಲಿ ನಮ್ಮ ಅಮ್ಮಂದಿರು / ಗೃಹಿಣಿಯರು ಯಾವತ್ತೂ ಹಿಂದೆ ಬಿದ್ದೋವ್ರಲ್ಲ. ಆ ತ್ಯಾಗ, ಪ್ರೀತಿ ತುಂಬಿದ ಸೇವೆಗೆ ಕೃತಜ್ಞತೆ ಹೇಗೆ ಸಲ್ಲಿಸೋದಪ್ಪ ಅಂತ ಯೋಚಿಸ್ತಾ ಇದ್ದ ಹಾಗೆ ಮನಸ್ಸು ಹಾಗೆ ಸೆಂಟಿಮೆಂಟಲ್ ಆಗ್ಬಿಡತ್ತೆ...
"ಹೋಗ್ಲಿ ಬಿಟ್ ಹಾಕ್" ಮಾಡ್ಲೆಬೇಕಾಗುತ್ತೆ.


ಈ ಐಟಿ , ಬಿಟಿ ಇತರೆ ಬಹುರಾಷ್ಟ್ರೀಯ ಕಂಪನಿಗಳು ನಮ್ಮ್ ದೇಶಕ್ಕೆ ಬಂದು ಬೇರೆ ಎನ್ ಆಯ್ತೋ ಗೊತ್ತಿಲ್ಲ ಆದ್ರೆ ನಮ್ಮ ಹುಡುಗ್ರು ಸ್ವಲ್ಪ ಮಟ್ಟಿಗಾದ್ರೂ ಮನೆ ಕೆಲಸ ಕಲಿತುಕೊಳ್ಳೋ ಹಾಗೆ ಆಯ್ತು ( ಪಟ್ಟಣದಲ್ಲಿ ಅಮ್ಮ ಎಲ್ಲಿರ್ತಾಳೆ ? ಕೆಲಸದವಳು ಏನೇ ಅಂದ್ರೂ ಮಾಡೋದು ಅಷ್ಟಕ್ಕಷ್ಟೇ. ) ಕಲಿತುಕೊಳ್ಳೋ ಜೊತೆಗೆ ಮನೆಗೆಲಸಕ್ಕೂ ಸ್ವಲ್ಪ ಗೌರವ ಕೊಡೋಕ್ಕೆ ಶುರು ಮಾಡಿದ್ರು. ಬೆವರು ಹರಿಸೋದು ಅಂದ್ರೆ ಸುಮ್ನೇನಾ ? ವಿದ್ಯೆ, ಬುದ್ದಿ ಜೊತೆಗೆ ಒಳ್ಳೇ ಕೆಲಸಗಳಲ್ಲಿರುವ ಇಂದಿನ ಹುಡುಗೀರನ್ನು ನೋಡ್ಕೊಂಡು ಹುಡುಗ್ರೂ ಎರಡೂ ಕ್ಷೇತ್ರಗಳಲ್ಲಿ ತಮ್ಮ ಅರ್ಹತೆಯನ್ನು ತೋರ್‌ಸ್ಕೊಳ್ಳಲೇಬೇಕು. ಒಂದ್ ರೀತಿಯಲ್ಲಿ ತಮ್ಮ ಕಾಲ ಮೇಲೆ ತಾವೇ ಸಂಪೂರ್ಣವಾಗಿ ನಿಂತ್ಕೋಬೇಕು ಅನ್ನೋ ಪರಿಸ್ಥಿತಿನೂ ಇದೆ...ಹೌದು ಕಾಲ ಬದಲಾಗ್ತ ಇದೆ , ಜನ ಬದಲಾಗ್ತ ಇದ್ದಾರೆ , "ಹೌಸ್ ವೈಫ್" ಹೋಗಿ "ಹೋಮ್ ಮೇಕರ್"  ಪದದ ಬಳಕೆ ಹೆಚ್ಚಾಗಿದೆ... ಹಾಗೆಯೇ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾದ ಈ ಮನೆಗೆಲಸಕ್ಕೆ + ಮನೆಗೆಲಸ ಮಾಡೋ ಜನರ ಬಗ್ಗೆ ಸ್ವಲ್ಪ ಮರ್ಯಾದೇನೂ ಜಾಸ್ತಿ ಆಗ್ಲಿ .. ಏನ್ ಅಂತೀರಾ ?

ಮುಂದಿನ ಸಲ "ಅಡಿಗೆ, ಪಾತ್ರೆ , ಬಟ್ಟೆ , ನೆಲ-ಕಸ ಇಷ್ಟು ಮಾಡಿದ್ರೆ ಆಗ್ ಹೋಯ್ತು ಮನೆ ಕೆಲ್ಸಾ" ಅನ್ನೋ ಮುಂಚೆ ಸ್ವಲ್ಪ 
ಯೋಚಿಸ್ತೀರಾ ?

ಪಿಸು : ಅಂದ ಹಾಗೆ ಯಾಕೆ ಇಷ್ಟೆಲ್ಲಾ ಪುರಾಣ , ನೀತಿ ಪಾಠ ಅಂತೀರಾ ? ಈಗ ತಾನೇ ವಾಷ್ ಬೇಸಿನ್ ತುಂಬಾ 
ತುಂಬ್ಕೊಂಡಿದ್ದ ಪಾತ್ರೆಗಳನ್ನು ತೊಳೆದು ಬರ್ತಾ ಇದ್ದೀನಿ...ಕಷ್ಟ, ಸುಖ ನಿಮ್ಮ್ ಜೊತೆ ಹಂಚ್ಕೊಳ್ಳೋದು ಬೇಡ್ವೆ ?? :)
Image From: Google Images

Saturday, October 9, 2010

ದಾರಿ ಬಿಡ್ರೋ..

"ದಾರಿಗಾಗಿ ಧ್ವನಿ ಮಾಡಿ" ಈ ಬೋರ್ಡ್ ಅನ್ನು ನಾವು ಎಷ್ಟು ಲಾರಿ, ಬಸ್ಸುಗಳ ಹಿಂದೆ ನೋಡಿಲ್ಲ ? ಕಾರು, ದ್ವಿಚಕ್ರ ವಾಹನಗಳ ಹಿಂದೆ ಈ ಥರಾ ಬೋರ್ಡ್ ಇಲ್ಲ ಅಂದ್ರೂ ಹಾರ್ನ್ ಮಾಡಿದ್ರೆ ದಾರಿ ಬಿಡಬೇಕು ಅನ್ನೋದು ಸಾಮಾನ್ಯ ಜ್ಞಾನ ಅಲ್ಲವೇ ? ಅದೇಕೋ ಏನೋ ನೋಡಿ ನಮ್ಮ ದೇಶದಲ್ಲಿ ಬೇರೆ ಯಾವದಕ್ಕೆ ಇಲ್ಲ ಅಂದ್ರೂ ಈ ಆಂಬ್ಯುಲೆನ್ಸ್ , ಅಗ್ನಿಶಾಮಕ ವಾಹನಗಳಿಗೆ ಜಪ್ಪಯ್ಯ ಅಂದ್ರು ದಾರಿ ಬಿಡೋವ್ರಲ್ಲ ನಾವು !! 'ಸುಮ್ನೇ ಸೈರನ್ ಹೊಡ್ಕೋತಾ ಇದೆ..ಹೋಡ್‌ಕೊಳ್ಲಿ ಬಿಡು' ಅನ್ನೋ ಮನೋಭಾವ.... ಇಲ್ಲ ಅಂದ್ರೆ 'ನನ್ ಗಂಟೇನ್ ಹೋಗೋದು ?' ಅನ್ನೋ ಉತ್ತರ .... ಅಯ್ಯೋ ಪಾಪ ಅನ್ನೋ ಒಂದಿಬ್ಬರು ಅತ್ತ ಇತ್ತ ನೋಡ್ತಾರೆ ...ಹೆಚ್ಚಿಗೆ ಅಂದ್ರೆ ಮುಖ ಸಣ್ಣದು ಮಾಡ್ಕೊಂಡು ಕೊರಗ್ತಾರೆ....ಅದಕ್ಕೆ ಆಂಬ್ಯುಲೆನ್ಸ್ ನಲ್ಲಿರೋ ರೋಗಿನ ಅಥವಾ ಹತ್ತಿ ಉರಿತಾ ಇರೋ ಮನೆಯನ್ನ್ ಆ ದೇವರೇ ಕಾಪಡ್ಬೇಕು ಅಂತ ನಿಮಗನ್ನಿಸಿದ್ರೆ ಅದ್ರಲ್ಲಿ ಆಶ್ಚರ್ಯ ಏನು ಇಲ್ಲ ಬಿಡಿ.

ಸರಿ ಇಲ್ಲಿ ಕೇಳಿ....ಮತ್ತೊಮ್ಮೆ ಅಮೇರಿಕದ ಒಂದು ಒಳ್ಳೇ ವ್ಯವಸ್ಥೆ ಬಗ್ಗೆ ಹೇಳ್ತೀನಿ. ಜನ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳಿಗೆ ಹೇಗೆ ಮರ್ಯಾದೆ ಕೊಡ್ತಾರೆ ಅನ್ನೋದನ್ನು ನೋಡಿದ್ರೆ ಸಾಕು ಇಲ್ಲಿನ ಜನರಿಗೆ ಕಾನೂನಿನಲ್ಲಿ ಇರೋ ಭಯ, ಸಾಮಾಜಿಕ ಕಾಳಜಿ, ಶಿಸ್ತು ಪಾಲನೆ ಬಗ್ಗೆ ನಮಗೆ ಅರಿವಾಗುತ್ತೆ. ಛೇ ನಮ್ಮ ದೇಶದಲ್ಲೂ ಈ ರೀತಿ ಇದ್ರೆ ಅನ್ನೋ ಯೋಚನೆ ತಕ್ಷಣ ಮನಸ್ಸಿಗೆ ಬರತ್ತೆ. 'ಸರಕಾರಗಳೇ ಸರಿಯಾಗಿ ಉಳಿಯೋಲ್ಲ ಇನ್ನು ಜನ ಸಾಮಾನ್ಯನ ಜೀವಕ್ಕೇನು ಕಿಮ್ಮತ್ತು' ಅನ್ನೋ ಅಪ್ರಸ್ತುತ, ಅಸಹಾಯಕ ಭಾವನೆಗಳ ಜೊತೆ  "ವ್ಯವಸ್ಥೆ ಎಲ್ಲಿ ಬದಲಾಗುತ್ತೆ ??" ಅಂತ ಕೈ ಚೆಲ್ಲಿ ಕುಳಿತ ಆಮ್ ಆದ್ಮಿಗಿಂತ ಭಿನ್ನ 
ಏನಲ್ಲ ನಾನು!....ಅಂತಾನೂ ಅನ್ಸತ್ತೆ.

ಹೋಗ್ಲಿ ಅದೇನು ವ್ಯವಸ್ಥೆ ಹೇಳಪ್ಪಾ ಅಂತ ನೀವು ಕೇಳ್ತಾ ಇದ್ರೆ...ತಕ್ಕೊಳ್ಳಿ...ಇದು ತುಂಬಾ ಸರಳ...ರಸ್ತೆಯ ಮೇಲೆ ನೀವು ಹೋಗ್ತಾ ಇರಬೇಕಾದ್ರೆ ಆಂಬ್ಯುಲೆನ್ಸ್ ಅಥವಾ ಅಗ್ನಿಶಾಮಕ ವಾಹನದ ಸೈರನ್ ಕೇಳಿದ್ರೆ ತಕ್ಷಣ ಅವ್ರಿಗೆ / ಅದಕ್ಕೆ ನೀವು ಜಾಗ ಬಿಡಬೇಕು. ರಸ್ತೆಯ ಗರಿಷ್ಟ ಬಲಗಡೆಗೆ ಹೋಗಿ ಆ ತುರ್ತು ಸೇವೆಯ ವಾಹನಗಳು ಮುಂದೆ ಹೋಗೋ ವರೆಗೂ ತಾಳ್ಮೆಯಿಂದ ಕಾದಿದ್ದು ನಂತರ ಚಲಿಸಬೇಕು. ಯಾವದೇ ಕಾರಣಕ್ಕೂ ಜಂಕ್ಷನ್‌ಗಳನ್ನು ಬ್ಲಾಕ್ ಮಾಡಬಾರದು. ಅಪಘಾತ ನಡೆದಿರುವ ಸ್ಥಳದಲ್ಲೋ ಅಥವಾ ಅಗ್ನಿ ಅನಾಹುತ ಸಂಭವಿಸಿರುವ ಜಾಗದಲ್ಲೋ ನಿಂತು ತುರ್ತು ಕಾರ್ಯಾಚರಣೆಗಳಿಗೆ ಅಡ್ಡಿ ಉಂಟುಮಾಡಬಾರದು . 

ಇನ್ನು ಹೆಚ್ಚೇನು ಹೇಳೋದಿಲ್ಲ...ಯಾಕಂದ್ರೆ ಹೆಚ್ಚೇನೂ ಉಳಿದಿಲ್ಲ....ಇಲ್ಲಿನ ಜನ ಕಾನೂನಿಗೆ ಗೌರವ ಕೊಟ್ಟು ಅದನ್ನು ಪಾಲಿಸುತ್ತಾರೆ ಅನ್ನೊದೇ ದೊಡ್ಡ ವಿಷಯ. ಜೊತೆಗೆ ಸ್ವಲ್ಪ ಒಳ್ಳೆಯತನ ಮೆರೀತಾರೆ ...  ಒಂದು ಜೀವ ಉಳಿಸೋ / ದೊಡ್ಡ ಅನಾಹುತ ತಪ್ಪಿಸುವ ಕಾರ್ಯಕ್ಕೆ ಅವರದೇ ಆದ ರೀತಿಯಲ್ಲಿ ನೆರವಾಗ್‌ತಾರೆ...
ಮುಂದಿನ ಸಲ ರಸ್ತೆಗಿಳಿದಾಗ ನಾವೂ ನಮ್ಮ ಜವಾಬ್ದಾರಿ ಅರಿತುಕೊಂಡು ಈ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗೋಣ್ವೇ?

ಪಿಸು : ಗೂಗಲ್ ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಇದು ( http://www.karnataka.com/driving-manual/ ) 
ಸಿಕ್ತು . ಸಮಯ ಇದ್ದಾಗ ಹಾಗೆ ಓದಿ....
ಚಿತ್ರ ಕೃಪೆ  ( Image from ) : Google Images

Sunday, October 3, 2010

ಈಗ ನನ್ ಹತ್ರಾನೂ ಇದೆ ಒಂದು ಐಪಾಡು :)

ಸ್ಟೀವ್ ಜಾಬ್ಸ್ ನ ಸೇಬಿನ ಕಂಪನಿಯ ( www.apple.com ) ಸಾಧನಗಳು/ಉಪಕರಣಗಳು ಯಾರಿಗೆ ತಾನೆ ಇಷ್ಟ ಆಗೋಲ್ಲ ? ಅದೂ ಅಮೇರಿಕಾದಲ್ಲಿ ಇದ್ದ್ಕೊಂಡು ಒಂದು ಮ್ಯಾಕೋ, ಐಪಾಡೋ, ಐಪ್ಯಾಡೋ , ಐಫೋನೋ ನಿಮ್ ಬಳಿ ಇಲ್ಲ ಅಂದ್ರೆ ಜನ ನಿಮ್ಮನ್ನ ಆಶ್ಚರ್ಯದಿಂದ ನೋಡ್ತಾನೇ ಇರ್ತಾರೆ. ಜನವರಿಯಲ್ಲಿ ಇಲ್ಲಿಗೆ ಬಂದಾಗ್ಲಿಂದಾನೂ ಇಲ್ಲಿ ಏನೇನು ತೊಗೋಬೋದು ಅಂತ ಅಣ್ಣ, ಅಕ್ಕ ನ ಜೊತೆ ಚಾಟು, ಇಮೇಲು, ಕಾಲ್ ನಲ್ಲಿ ಮಾತಾಡಿದ್ದೇ ಮಾತಾಡಿದ್ದು, ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದೇ ನಡೆಸಿದ್ದು... ಅವರಿವರ ಬಳಿ ಕೇಳಿದ ಸಲಹೆ, ಅಭಿಪ್ರಾಯಗಳಿಗೂ ಎನ್ ಕಮ್ಮಿ ಇಲ್ಲ. ಹಲವಾರು ದಿನಗಳ ಚರ್ಚೆಯ ಬಳಿಕ ಲ್ಯಾಪ್ ಟಾಪ್ ಬೇಡ ಅಂತ ನಿರ್ಧಾರ ಆಯ್ತು !

ಅಣ್ಣನಿಂದ ನೆಕ್ಸ್ಟ್ ಕ್ಯಾಮೆರಾ ತೊಗೋ ಅಂತ ಸಲಹೆ ಬಂತು . ಸರಿ ಕಣಣ್ಣೋ ಅಂತ ನೈಕಾನ್ ಕಂಪನಿಯ ಡೀ೫೦೦ ( http://bit.ly/aLVmW2 ) ಎತ್ತ್ಕೊಂಡೆ. ಓಕೇ ... ಆದ್ರೆ ಸ್ಟೀವ್ ಜಾಬ್ ಮಾಮಾ ಹತ್ರ ಏನು ತೊಗೊಂಡಿಲ್ಲ ಅನ್ನೋ ಯೋಚನೆ / ಚಿಂತೆ ಬಹಳ ದಿನಗಳಿಂದ ಇತ್ತು. ಹಾಗೆ ಮಾಡದೇ ಅಮೇರಿಕ ಪ್ರವಾಸ ಪೂರ್ಣಗೊಳ್ಳೋಲ್ಲ ಅನ್ನೋದೂ ಗೊತ್ತಿತ್ತು. ೪-೫ ತಿಂಗಳ ಹಿಂದೆ ಐಫೋನ್ ನ ೪ ನೇ ಜನರೇಷನ್ ಮಾಡೆಲ್ ಬಿಡುಗಡೆಗೊಂಡಾಗ ತೊಗೊಳ್ಳೋ ಮನಸ್ಸೇನೋ ಆಯ್ತು...ಆದ್ರೆ ನನ್ ಮಗಂದು ೨ ವರ್ಷಗಳ ಕಾಂಟ್ರಾಕ್ಟ್ ಇಲ್ಲದೇ ಸಿಗೋಲ್ವೇ !! ಕರಾರನ್ನು ಮುರಿದ್ರೆ ಕಡಿಮೆ ಅಂದ್ರೂ ೫೦೦-೮೦೦ ಡಾಲರ್ ಗಳನ್ನು ಹೆಚ್ಚಾಗಿ ಕಕ್ಕಬೇಕು !! ಯಾರಿಗಪ್ಪ ಮನಸ್ಸಾಯ್ತದೆ ?? ಸರಿ ಐಫೋನ್ಗೂ ನಮಸ್ಕಾರ ಅಂದೆ.

ಐಫೋನ್ ೪ ರ ಬೆನ್ನಲ್ಲೆ ಮೊನ್ನೆ ಐಪಾಡ್ ಟಚ್-೪ ಮಾರುಕಟ್ಟೆಗೆ ಬಂತು ... ಅದರ ತೆಳ್ಳಗಿನ ವ್ಯಕ್ತಿತ್ವ, ಹೊಸ ರೂಪ, ಸೂಕ್ಷ್ಮ ಹಾಗು ನಾಜೂಕುತನ , ಅದರ ಹಿಂದೆ ಬಿದ್ದ ಕೊಳ್ಳುಗರ ಸಾಲು, ಸುತ್ತಲೂ ಹರಿದಾಡುತ್ತಿದ್ದ ಒಳ್ಳೊಳ್ಳೇ ಮಾತುಗಳು ...."ಇನ್ನು ತಡ ಮಾಡ್‌ಬೇಡ್ಲೆ ತಮ್ಮಾ"  ಅಂತ ಮನಸ್ಸೂ ಪ್ರೆಷರ್ ಹಾಕೋಕ್ಕೆ ಶುರು ಮಾಡ್ಬಿಡ್ತು....ಸರಿ ನಿನ್ನ ಎದುರು ಹಾಕೊಳ್ಳೋಕ್ಕೆ ಆಗುತ್ತಾ ಅಂತ  ಅಣ್ಣನಿಗೊಂದು ಮಾತು ಹೇಳಿ , www.pricegrabber.com   ನಲ್ಲಿ ದರಗಳನ್ನು ತಾಳೆ ಮಾಡಿ ನೋಡಿ ನಮ್ಮ www.amazon.com ಎಲ್ಲರಿಗಿಂತ ಬೆಸ್ಟು ಅಂತ ಗೊತ್ತಾದೊಡನೆ ಐಪಾಡ್ ಅನ್ನು ಎತ್ತಿ ಗಾಡಿಗೆ( Cart ) ಹಾಕಿ ಆರ್ಡರ್ ಮಾಡೇ ಬಿಟ್ಟೆ :) 


ನನ್ ಐಪಾಡು ( ಹೌದು ಮೇಲಿರೋದೇ :) ) ಮನೆಗೆ ಬಂದ ಕಳೆದ ೩-೪ ದಿನಗಳಿಂದ ದಿನದ ಅರ್ಧ ಸಮಯ ಅದಕ್ಕೇ ಮೀಸಲು :) ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲಿ ? ಮಾಮಾ ಐಪಾಡು ಸಕ್ಕತ್ತಾಗಿದೆ..ನಿಂಗೆ ತುಂಬಾ ಥ್ಯಾಂಕ್ಸ್ :)

Friday, October 1, 2010

ನಮ್ಮ ಬೆಂಗಳೂರಿನಲ್ಲೂ ಇಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದ್ರೆ ? ( ಭಾಗ - ೨)


ಇನ್ನಷ್ಟು ವಿಶೇಷಗಳು
* ಪ್ರತಿಯೊಂದು ಬಸ್ ನಿಲ್ದಾಣದಲ್ಲೂ ಆ ಮಾರ್ಗದಲ್ಲಿ ಚಲಿಸುವ ಬಸ್‌ಗಳ ಸಂಖ್ಯೆಯನ್ನು ದಪ್ಪಕ್ಷರಗಳಲ್ಲಿ ನಮೂದಿಸಲಾಗಿರತ್ತೆ. ಮಾಹಿತಿ ವಿಚಾರಣೆಗಾಗಿ ಕರೆ ಮಾಡಬೇಕಾದ ಸಂಖ್ಯೆಯೂ ಅಲ್ಲಿರತ್ತೆ (ಪಕ್ಕದಲ್ಲಿದೆ ಒಂದು ಮಾದರಿ ಬೋರ್ಡ್). 

* ನಿಲ್ದಾಣಗಳು ಚಿಕ್ಕದಾಗಿದ್ದರೂ ಚೊಕ್ಕವಾಗಿ ಇರತ್ವೆ. ಪ್ರಯಾಣಿಕರಿಗೆ ಬೇಕಾದ ಅಗತ್ಯ ಮಾಹಿತಿಗಳು, ಬಸ್ಸಿನ ಸಮಯ,  ಮಾರ್ಗ ನಕ್ಷೆಗಳೂ ಇಲ್ಲಿ ಲಭ್ಯ.ಆರಾಮವಾಗಿ ಕೂರಲು ಸುಖಾಸನಗಳು, ನೆರಳಿಗಾಗಿ ಒಳ್ಳೆಯ ಛಾವಣಿಗಳು , ಸಂದೇಶಗಳ ಪ್ರಕಟಣೆಗಳಿಗಾಗಿ ಧ್ವನಿ ವರ್ಧಕ ವ್ಯವಸ್ಥೆ , ಎಲೆಕ್ಟ್ರಾನಿಕ್ ಗಡಿಯಾರಗಳು...ಹುಮ್ ಹೇಳ್ತಾ ಹೋದ್ರೆ ದೊಡ್ಡ ಪಟ್ಟಿನೇ ಆಗತ್ತೇನೋ ! ಕೆಳಗೆ ಬಸ್ ಮತ್ತು ಲೈಟ್ ರೈಲ್ ನಿಲ್ದಾಣಗಳ ೩ ಚಿತ್ರ ಹಾಕ್ತ ಇದ್ದೀನಿ.ನಿಮ್ಮ ಕಲ್ಪನೆಗಳ ಜೊತೆ ಹೊಂದಾಣಿಕೆ ಮಾಡ್ಕೊಂಡು ನೋಡಿ.



*  ಇನ್ನೊಂದು ಅದ್ಭುತವಾದ ವಿಷಯ ಅಂದ್ರೆ ವಿಕಲಚೇತನರಿಗೆ ಸಿಗುವ ಸವಲತ್ತುಗಳು. ಅವರಿಗೆಂದೇ ವಿಶೇಷವಾಗಿ ನಿರ್ಮಿಸಲಾದ ರ್‍ಯಾಂಪ್‌ಗಳು ಎಲ್ಲೆಡೆಯೂ ಕಾಣಸಿಗುತ್ತವೆ. ಪ್ರತಿ ಬಸ್ ನಲ್ಲಿ ಇಬ್ಬರು ಗಾಲಿ ಕುರ್ಚಿ ಸವಾರರನ್ನು ಕರೆದುಕೊಂಡು ಹೋಗೋ ಅವಕಾಶ ಇದೆ. ಬಸ್‌ಗಳಲ್ಲಿ ಅವಕ್ಕೆಂದೇ ವಿಶೇಷವಾದ ಲಾಕ್ ಗಳು ಇವೆ. ಬಸ್‌ನ ಮುಂಭಾಗದಲ್ಲಿ ಇರೋ ಹೈಡ್ರಾಲಿಕ್ ನ ಸಹಾಯದಿಂದ ಬಸ್ ಅನ್ನು ಕೆಳಗೆ ಕುಗ್ಗಿಸಬಹುದು !! ಸಣ್ಣ ಮಕ್ಕಳಿಗೆ, ವಯಸ್ಸಾದವರಿಗೆ, ವಿಕಲಚೇತನರಿಗೆ ಇದರಿಂದ ಆಗೋ ಅನುಕೂಲಾನ ನಾನು ಕಣ್ಣಾರೆ ನೋಡಿದ್ದೀನಿ.

* ಇಷ್ಟೇ ಅಲ್ಲ .. ನಮ್ಮ ಕಲ್ಪನೆಗೂ ನಿಲುಕದ ಮಹತ್ತರವಾದ ಯೋಜನೆಯೊಂದು ಇಲ್ಲಿದೆ ( ನನ್ನ ದೃಷ್ಟಿಯಲ್ಲಿ ಇದೊಂದು ರೀತಿಯ ಪುಣ್ಯದ ಕೆಲಸ !). ಬಸ್, ರೈಲ್ ನಿಲ್ದಾಣಗಳಿಗೆ ಪ್ರಯಾಣ ಮಾಡಲು ತೊಂದರೆ ಇರೋ ವಿಕಲಚೇತನರಿಗೆ, ವೃದ್ಧರಿಗೆ  ಔಟ್ರೀಚ್ ಎಂಬ ಸೇವೆ ಇದೆ. ಕರೆ ಮಾಡಿದ್ರೆ ಸಾಕು, ಮನೆ ಬಾಗಿಲಿಗೆ ಬಂದು ಸಮೀಪದ ರೈಲ್,ಬಸ್ ನಿಲ್ದಾಣದವರೆಗೆ ಅತ್ಯಂತ ಕಡಿಮೆ ದರದಲ್ಲಿ ಕಾರ್ ಡ್ರಾಪ್ !! ನಂಬೋಕ್ಕೆ ಕಷ್ಟ ಆದರೂ ನಂಬಿ. ಕೆಳಗಿನ ಚಿತ್ರದ ಮೇಲೆ ಹಾಗೆ ಕಣ್ಣು ಹಾಯಿಸಿ.


... ( ಮುಂದುವರೆಯುವುದು )
ಚಿತ್ರ ಕೃಪೆ ( Images from ) : Google Images & www.vta.org