WELCOME !

WELCOME ! No images or posts on this blog may be copied or reproduced without owners permission.

Saturday, October 9, 2010

ದಾರಿ ಬಿಡ್ರೋ..

"ದಾರಿಗಾಗಿ ಧ್ವನಿ ಮಾಡಿ" ಈ ಬೋರ್ಡ್ ಅನ್ನು ನಾವು ಎಷ್ಟು ಲಾರಿ, ಬಸ್ಸುಗಳ ಹಿಂದೆ ನೋಡಿಲ್ಲ ? ಕಾರು, ದ್ವಿಚಕ್ರ ವಾಹನಗಳ ಹಿಂದೆ ಈ ಥರಾ ಬೋರ್ಡ್ ಇಲ್ಲ ಅಂದ್ರೂ ಹಾರ್ನ್ ಮಾಡಿದ್ರೆ ದಾರಿ ಬಿಡಬೇಕು ಅನ್ನೋದು ಸಾಮಾನ್ಯ ಜ್ಞಾನ ಅಲ್ಲವೇ ? ಅದೇಕೋ ಏನೋ ನೋಡಿ ನಮ್ಮ ದೇಶದಲ್ಲಿ ಬೇರೆ ಯಾವದಕ್ಕೆ ಇಲ್ಲ ಅಂದ್ರೂ ಈ ಆಂಬ್ಯುಲೆನ್ಸ್ , ಅಗ್ನಿಶಾಮಕ ವಾಹನಗಳಿಗೆ ಜಪ್ಪಯ್ಯ ಅಂದ್ರು ದಾರಿ ಬಿಡೋವ್ರಲ್ಲ ನಾವು !! 'ಸುಮ್ನೇ ಸೈರನ್ ಹೊಡ್ಕೋತಾ ಇದೆ..ಹೋಡ್‌ಕೊಳ್ಲಿ ಬಿಡು' ಅನ್ನೋ ಮನೋಭಾವ.... ಇಲ್ಲ ಅಂದ್ರೆ 'ನನ್ ಗಂಟೇನ್ ಹೋಗೋದು ?' ಅನ್ನೋ ಉತ್ತರ .... ಅಯ್ಯೋ ಪಾಪ ಅನ್ನೋ ಒಂದಿಬ್ಬರು ಅತ್ತ ಇತ್ತ ನೋಡ್ತಾರೆ ...ಹೆಚ್ಚಿಗೆ ಅಂದ್ರೆ ಮುಖ ಸಣ್ಣದು ಮಾಡ್ಕೊಂಡು ಕೊರಗ್ತಾರೆ....ಅದಕ್ಕೆ ಆಂಬ್ಯುಲೆನ್ಸ್ ನಲ್ಲಿರೋ ರೋಗಿನ ಅಥವಾ ಹತ್ತಿ ಉರಿತಾ ಇರೋ ಮನೆಯನ್ನ್ ಆ ದೇವರೇ ಕಾಪಡ್ಬೇಕು ಅಂತ ನಿಮಗನ್ನಿಸಿದ್ರೆ ಅದ್ರಲ್ಲಿ ಆಶ್ಚರ್ಯ ಏನು ಇಲ್ಲ ಬಿಡಿ.

ಸರಿ ಇಲ್ಲಿ ಕೇಳಿ....ಮತ್ತೊಮ್ಮೆ ಅಮೇರಿಕದ ಒಂದು ಒಳ್ಳೇ ವ್ಯವಸ್ಥೆ ಬಗ್ಗೆ ಹೇಳ್ತೀನಿ. ಜನ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳಿಗೆ ಹೇಗೆ ಮರ್ಯಾದೆ ಕೊಡ್ತಾರೆ ಅನ್ನೋದನ್ನು ನೋಡಿದ್ರೆ ಸಾಕು ಇಲ್ಲಿನ ಜನರಿಗೆ ಕಾನೂನಿನಲ್ಲಿ ಇರೋ ಭಯ, ಸಾಮಾಜಿಕ ಕಾಳಜಿ, ಶಿಸ್ತು ಪಾಲನೆ ಬಗ್ಗೆ ನಮಗೆ ಅರಿವಾಗುತ್ತೆ. ಛೇ ನಮ್ಮ ದೇಶದಲ್ಲೂ ಈ ರೀತಿ ಇದ್ರೆ ಅನ್ನೋ ಯೋಚನೆ ತಕ್ಷಣ ಮನಸ್ಸಿಗೆ ಬರತ್ತೆ. 'ಸರಕಾರಗಳೇ ಸರಿಯಾಗಿ ಉಳಿಯೋಲ್ಲ ಇನ್ನು ಜನ ಸಾಮಾನ್ಯನ ಜೀವಕ್ಕೇನು ಕಿಮ್ಮತ್ತು' ಅನ್ನೋ ಅಪ್ರಸ್ತುತ, ಅಸಹಾಯಕ ಭಾವನೆಗಳ ಜೊತೆ  "ವ್ಯವಸ್ಥೆ ಎಲ್ಲಿ ಬದಲಾಗುತ್ತೆ ??" ಅಂತ ಕೈ ಚೆಲ್ಲಿ ಕುಳಿತ ಆಮ್ ಆದ್ಮಿಗಿಂತ ಭಿನ್ನ 
ಏನಲ್ಲ ನಾನು!....ಅಂತಾನೂ ಅನ್ಸತ್ತೆ.

ಹೋಗ್ಲಿ ಅದೇನು ವ್ಯವಸ್ಥೆ ಹೇಳಪ್ಪಾ ಅಂತ ನೀವು ಕೇಳ್ತಾ ಇದ್ರೆ...ತಕ್ಕೊಳ್ಳಿ...ಇದು ತುಂಬಾ ಸರಳ...ರಸ್ತೆಯ ಮೇಲೆ ನೀವು ಹೋಗ್ತಾ ಇರಬೇಕಾದ್ರೆ ಆಂಬ್ಯುಲೆನ್ಸ್ ಅಥವಾ ಅಗ್ನಿಶಾಮಕ ವಾಹನದ ಸೈರನ್ ಕೇಳಿದ್ರೆ ತಕ್ಷಣ ಅವ್ರಿಗೆ / ಅದಕ್ಕೆ ನೀವು ಜಾಗ ಬಿಡಬೇಕು. ರಸ್ತೆಯ ಗರಿಷ್ಟ ಬಲಗಡೆಗೆ ಹೋಗಿ ಆ ತುರ್ತು ಸೇವೆಯ ವಾಹನಗಳು ಮುಂದೆ ಹೋಗೋ ವರೆಗೂ ತಾಳ್ಮೆಯಿಂದ ಕಾದಿದ್ದು ನಂತರ ಚಲಿಸಬೇಕು. ಯಾವದೇ ಕಾರಣಕ್ಕೂ ಜಂಕ್ಷನ್‌ಗಳನ್ನು ಬ್ಲಾಕ್ ಮಾಡಬಾರದು. ಅಪಘಾತ ನಡೆದಿರುವ ಸ್ಥಳದಲ್ಲೋ ಅಥವಾ ಅಗ್ನಿ ಅನಾಹುತ ಸಂಭವಿಸಿರುವ ಜಾಗದಲ್ಲೋ ನಿಂತು ತುರ್ತು ಕಾರ್ಯಾಚರಣೆಗಳಿಗೆ ಅಡ್ಡಿ ಉಂಟುಮಾಡಬಾರದು . 

ಇನ್ನು ಹೆಚ್ಚೇನು ಹೇಳೋದಿಲ್ಲ...ಯಾಕಂದ್ರೆ ಹೆಚ್ಚೇನೂ ಉಳಿದಿಲ್ಲ....ಇಲ್ಲಿನ ಜನ ಕಾನೂನಿಗೆ ಗೌರವ ಕೊಟ್ಟು ಅದನ್ನು ಪಾಲಿಸುತ್ತಾರೆ ಅನ್ನೊದೇ ದೊಡ್ಡ ವಿಷಯ. ಜೊತೆಗೆ ಸ್ವಲ್ಪ ಒಳ್ಳೆಯತನ ಮೆರೀತಾರೆ ...  ಒಂದು ಜೀವ ಉಳಿಸೋ / ದೊಡ್ಡ ಅನಾಹುತ ತಪ್ಪಿಸುವ ಕಾರ್ಯಕ್ಕೆ ಅವರದೇ ಆದ ರೀತಿಯಲ್ಲಿ ನೆರವಾಗ್‌ತಾರೆ...
ಮುಂದಿನ ಸಲ ರಸ್ತೆಗಿಳಿದಾಗ ನಾವೂ ನಮ್ಮ ಜವಾಬ್ದಾರಿ ಅರಿತುಕೊಂಡು ಈ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗೋಣ್ವೇ?

ಪಿಸು : ಗೂಗಲ್ ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಇದು ( http://www.karnataka.com/driving-manual/ ) 
ಸಿಕ್ತು . ಸಮಯ ಇದ್ದಾಗ ಹಾಗೆ ಓದಿ....
ಚಿತ್ರ ಕೃಪೆ  ( Image from ) : Google Images

1 comment:

Unknown said...

Tumba olle lekhana guru!!