WELCOME !

WELCOME ! No images or posts on this blog may be copied or reproduced without owners permission.

Saturday, October 23, 2010

ಹತ್ತಿ ಉರಿತಾ ಇರೋ ದೇಶ ....ತಣ್ಣಗೆ ಕೂತ್ಕೊಂಡು ತಮಾಷೆ ನೋಡೋ ಜನ.

"ನಾವು ( ಅಂದ್ರೆ ಭಾರತೀಯರು ) ಯಾಕೆ ಹೀಗೆ ?" ಅನ್ನೋ ಪ್ರಶ್ನೆನಾ ನಾನು ಪದೇ ಪದೇ ನನಗೆ ನಾನೇ ಕೇಳ್ಕೊಳ್ತಾ ಇರ್ತೀನಿ. ಸ್ವಾತಂತ್ರ್ಯ ಸಿಕ್ಕಿ ೬೦ ವರ್ಷಗಳಾದರೂ "ಸಧ್ೃಡ ಹಾಗೂ ಶಕ್ತಿಶಾಲಿ ಭಾರತ" ಅನ್ನೋ ಒಂದು ರಾಷ್ಟ್ರದ ಕಲ್ಪನೆಯಿಂದ ನಮ್ಮನ್ನು ನಾವು ಯಾಕೆ ದೂರ ಇಟ್ಕೊಂಡ್ ಇದ್ದೀವಿ ಅನ್ನೋ ಪ್ರಶ್ನೆಗೆ ನನ್ನ ಬಳಿ ಸರಿಯಾದ ಉತ್ತರ ಇನ್ನೂ ಇಲ್ಲ. 

ಕಳ್ಳತನ, ಸುಲಿಗೆ, ದರೋಡೆ , ಅತ್ಯಾಚಾರ, ಭ್ರಷ್ಟಾಚಾರ ಪ್ರಕರಣಗಳು ಹಾಗಿರಲಿ ದೇಶದ ಐಕ್ಯತೆ ಹಾಗೂ ಸಮಗ್ರತೆಯ ವಿಷಯದಲ್ಲೂ ಗಂಭೀರತೆಯನ್ನು ತೋರಿಸೋವ್ರಲ್ಲ ನಾವು !  ಶತ್ರು ಪಡೆಗಳು ಸರ್ವ ಮಾರ್ಗದಲ್ಲೂ ನಮ್ಮ ಮೇಲೆ ಕತ್ತಿ 
ಮಸೆಯುತ್ತಿದ್ದರೆ ಹೇಡಿಗಳಂತೆ ಕೈಕಟ್ಟಿ ಕುಳಿತಿರೋವ್ರು ನಾವು. ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿ , ಅವರ ಮೇಲಿನ ಆರೋಪ ಸಾಬೀತಾಗಿ , ಶಿಕ್ಷೆಗೆ ಗುರಿಯಾಗಿರುವವರನ್ನು ನೇಣುಗಂಬಕ್ಕೆ ಏರಿಸಬೇಕೋ ಬೇಡವೋ ಎಂದು ಚಿಂತಿಸುವ ಅಸಹಾಯಕರು ನಾವು !  ನೋಡಿ .. ನಮ್ಮ ಅಮಾಯಕ ನಾಗರೀಕರು, ಸೈನಿಕರು , ಪೊಲೀಸರು ಹತ್ಯೆಯಾದಾಗ ಎಲ್ಲಿಯೂ ಕಾಣಸಿಗದ ಮಾನವ ಹಕ್ಕುಗಳ ಪ್ರತಿಪಾದಕರು ಅದ್ ಹೇಗೋ ಕೈದಿಗಳಿಗೆ, ನಕ್ಸಲರಿಗೆ , ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ ಉಗ್ರಗಾಮಿಗಳಿಗೆ ಸೂಜಿ ಚುಚ್ಚಿದರೂ ಬೊಬ್ಬೇ ಹಾಕುತ್ತಾರೆ . ಹೆಚ್ಚಾಗಿ ವಿದೇಶಿ ಮೂಲದ ಹಣದಿಂದ ನಡೀತಾ ಇರೋ ನಮ್ಮ ಮಾಧ್ಯಮಗಳು ( ಅದರಲ್ಲೂ ಆಂಗ್ಲ ಟಿವಿ ನ್ಯೂಸ್ ಚಾನೆಲ್‌ಗಳು ) ಇಂತಹವರಿಗೆ ಪುಕ್ಕಟ್ಟೆ ಪ್ರಚಾರವನ್ನೂ ನೀಡುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯ , ವಾಕ್ ಸ್ವಾತಂತ್ರ್ಯ ಎಂದು ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ಸಮರ್ಥಿಸಿ , ದೇಶದ ಹಿತಾಸಕ್ತಿಯ ಪರವಾಗಿ ಮಾತಾಡೋ ಜನರನ್ನೇ ಖಳ ನಾಯಕರಂತೆ ಪ್ರತಿಬಿಂಬಿಸಿಬಿಡುತ್ತವೆ. ಆದರೂ ಇದನೆಲ್ಲಾ ಬೇಜಾರಿಲ್ಲದೇ ಸಹಿಸಿಕೊಳ್ಳೋವ್ರು ನಾವು ! 


ಹೀಗೆ ಮೊನ್ನೆ ದೆಹಲಿಯಲ್ಲಿ "ಸ್ವಾತಂತ್ರ್ಯವೊಂದೇ ಉತ್ತರ" ["Azadi is the only Solution"] ಎಂಬ ತಲೆ ಬರಹದಡಿ ನಮ್ಮ ದೇಶದ ದೊಡ್ಡ ದೊಡ್ಡ ತಲೆ ಹರಟೆಗಳು ಸಮಾವೇಷವೊಂದನ್ನು ಮಾಡಿದ್ದಾರೆ. ಪ್ರತ್ಯೇಕ ಕಾಶ್ಮೀರ ರಾಷ್ಟ್ರದ ಕನಸು ಕಾಣೋ ಹುರ್ರಿಯತ್ ಕಾನ್ಫರೆನ್ಸ್ , ಖಲಿಸ್ತಾನ್ ಬೆಂಬಲಿಗರು , ನಕ್ಸಲರ ಜೊತೆಯಲ್ಲಿ ಗುರುತಿಸಿಕೊಳ್ಳುವ ಹಾಗೂ ಕೆಲವರಿಂದ ಬುದ್ಧಿ ಜೀವಿಗಳೆಂದು ಕರೆಸಿಕೊಳ್ಳೋ ಜನರು ಇದರಲ್ಲಿ ಭಾಗವಹಿಸಿದ್ದಾರೆ. ಈ ಮೇಧಾವಿಗಳು, ಸಮಾವೇಶದಲ್ಲಿ ಭಾರತದ ಸಂವಿಧಾನವನ್ನು ಸಾರ ಸಗಟಾಗಿ ತಿರಸ್ಕರಿಸಿದ್ದಾರೆ. ಸ್ವಾತಂತ್ರ್ಯ ಪಡೆಯೋ ವಿಚಾರದಲ್ಲಿ ರಾಜಿಯೇ ಇಲ್ಲ ಎಂದು ಘೋಷಿಸಿದ್ದಾರೆ. ಕಾಶ್ಮೀರದಲ್ಲಿ ಪಾಕಿ ಬಾವುಟ ಹಾರಿಸಿದ್ದು, ತ್ರಿವರ್ಣವನ್ನು ಸುಟ್ಟಿದ್ದು, ಸಶಸ್ತ್ರ ಪಡೆಗಳ ಮೇಲೆ ಕಲ್ಲು ತೂರಿದ್ದು, ಭಾನುವಾರದ ಬದಲಿಗೆ ಶುಕ್ರವಾರವನ್ನು ರಜೆಯಾನ್ನಾಗಿ ಘೋಷಿಸಿದ್ದು ... ಇತ್ಯಾದಿಗಳು ಯಾವ ರೀತಿಯಲ್ಲೂ ತಪ್ಪೇ ಅಲ್ಲ ಎಂಬ ಸಂದೇಶ ನೀಡಿ ದರ್ಪ ಮೆರೆದಿದ್ದಾರೆ. ಕೆಲ ಕಾಲದಿಂದ  ಕೆಲಸವಿಲ್ಲದೇ ಮತಿ ಭ್ರಮಣೆಗೊಳಗಾಗಿರೋ , ನಕ್ಸಲರನ್ನು ತನ್ನ ಆರಾಧ್ಯ ದೈವರಂತೆ ಕಾಣೋ ಅರುಂಧತಿ ರಾಯ್ ಅಂತಹ ಜನರೂ ಈ ದೇಶವಿರೋಧಿ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಬೆಂಬಲ ಹಾಗೂ ಅನುಕಂಪವನ್ನು ಧಾರಾಳವಾಗಿ ನೀಡಿದ್ದಾರೆ. 

ಇಷ್ಟೆಲ್ಲಾ ನಮ್ಮ ಕೇಂದ್ರ ಗೃಹ ಸಚಿವಾಲಯ ಹಾಗೂ ಸಂಸತ್ತಿನ ಬಳಿಯೇ ನಡೆದಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಕಮಕ್ ಕಿಮಕ್ ಅನ್ನದೇ ಬಾಯ್ಮುಚ್ಚಿ ಕುಳಿತಿವೆ. ಇನ್ನು ನಾವೋ...ಹೇಳೋದೇ ಬೇಡ...ಎಂದಿನಂತೆ ನನ್ನ ಕೆಲಸ, ನನ್ನ ಸಂಬಳ, ನನ್ನ ಮನೆ, ಹೆಂಡತಿ, ಮಕ್ಕಳು ಎಂಬ ಸ್ವಯಂ ಕೇಂದ್ರೀಕೃತ ವಿಷಯಗಳಲ್ಲೇ ಪುರುಸೊತ್ತಿಲ್ಲ...ದೇಶ ಯಾವೋನ್ಗೆ ಬೇಕು ಅನ್ನೋ ಆಲಸ್ಯ, ತಾತ್ಸಾರದ ಮನೋಭಾವ !

ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಸಹಸ್ರಾರು ತ್ಯಾಗ ಬಲಿದಾನಗಳಿವೆ ಎಂಬುದನ್ನು ನಾವೇಕೆ ಮರೆತ್ತಿದ್ದೆವೆ ? ಗಾಂಧೀಯಂತಹ ಶಾಂತಿ ಪ್ರಿಯನ ಜೊತೆ ಸುಭಾಷ್, ಸರ್ದಾರ್ ಪಟೇಲರಂತಹ ಉಕ್ಕಿನ ಮನುಷ್ಯರನ್ನೂನಮ್ಮ ದೇಶ ನಮಗೆ ನೀಡಿಲ್ಲವೇ ? ಹಾಗಾದ್ರೆ ಯಾಕೆ ಈ ಹೇಡಿತನ ? ಯಾಕೆ ಈ ನಪುಂಸಕತ್ವದ ಪ್ರದರ್ಶನ ? ನಾನು ಮೊದಲೇ ಹೇಳಿದಂತೆ ನನ್ನ ಬಳಿ ಇದಕ್ಕೆ ಸರಿಯಾದ ಉತ್ತರವಿಲ್ಲ !!

ನಮ್ಮ ಭಾರತ ಮಾತೆಗಾಗಿ, ಭಾರತದ ಏಳಿಗೆಗಾಗಿ, ಹಾಗೂ ಭಾರತೀಯರಿಗಾಗಿ, ರಾಜಕೀಯ ಇಚ್ಛಾಶಕ್ತಿ, ಶಕ್ತ ಪ್ರಧಾನಿ , ವೋಟ್ಬ್ಯಾಂಕ್ ರಹಿತ ರಾಜಕಾರಣ , ಎಲ್ಲಕ್ಕಿಂತ ಹೆಚ್ಚಾಗಿ ಎಚ್ಚೆತ್ತ ನಾಗರೀಕರು , ದೇಶಾಭಿಮಾನಿಗಳು ಎಂದಿಗಿಂತಲೂ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಬೇಕು..ಇಲ್ಲ ಅಂದ್ರೆ ನಮ್ಮ ಭಾರತ ಕೆಲವೇ ವರ್ಷಗಳಲ್ಲಿ ತುಂಡು ತುಂಡಾಗೋಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ ?

ತಮಾಷೆ ನೋಡಿದ್ದು ಸಾಕು ಇನ್ನು..ಮೈಚಳಿ ಬಿಟ್ಟು ನಿದ್ದೆಯಿಂದ ಎಳೋಣ್ವೆ ??
Image from : Google Images

2 comments:

Bharath said...

Chennagi ede..Ellaru odabeka lekhana

Unknown said...

ಬರೀ ನನ್ನ ಕೆಲಸ, ನನ್ನ ಸಂಬಳ ಮಾತ್ರ ಅಲ್ಲ, ನಮ್ಮ ಪ್ರಜ್ನೆ ಬ್ಲೊಗ್ ಬರೆಯುವುದು ಮತ್ತು ಅದನ್ನು ಹೊಗಳುವುದಕ್ಕೆ ಮಾತ್ರ ಸೀಮಿತವಾಗಿರದೆ, ಸ್ವತಹ ಬದಲಾವಣೆ ತಂದರೆ ದೇಶ ಉದ್ಧಾರವಾದೀತು.ದೇಶೀಯರನ್ನೇ ನುಂಗುವ ದೇಶದ್ರೋಹಿಗಳ ನಡುವೆ ಕೈಕಟ್ಟಿದಂತಿದೆ ನಮ್ಮ ಜೀವನ!
ಚೆನ್ನಾಗಿದೆ ಬರವಣಿಗೆ!