WELCOME !

WELCOME ! No images or posts on this blog may be copied or reproduced without owners permission.

Tuesday, January 11, 2011

ಚಳೀಗಾಲ ಅಂದ್ರೆ ಮೈ ಕಾಯಿಸೋದೇ ದೊಡ್ಡ ಕೆಲಸ !

ಈ ಪಾಟಿ ಚಳಿನಾ ನಾನು ಎಂದೂ ಕಂಡಿರಲ್ಲಿಲ್ಲ. ಅಮೇರಿಕಾದ ಬಹಳಷ್ಟು ಕಡೆಗಳಲ್ಲಿ ಆಗೋ ಹಾಗೆ ಹಿಮಪಾತ ಏನೂ ಇಲ್ಲಿ  (ನಾನು ಸದ್ಯಕ್ಕೆ ನೆಲಸಿರುವ ಕ್ಯಾಲಿಫೋರ್ನಿಯಾದ ಸನ್ನೀವೇಲ್ನಲ್ಲಿ ) ಇಲ್ಲ..ಆದ್ರೂ ೪-೫ ಡಿಗ್ರೀ ತಾಪಮಾನಕ್ಕೆ  ಕೊರತೆ ಏನೂ ಇಲ್ಲ. ಅಷ್ಟೇ ಅಲ್ಲ ಬೆಳಗ್ಗೆ ೯-೧೦ ಗಂಟೆಗೆ ಸದ್ಯ ಬೆಳಕಾಯ್ತು ಅನ್ನೋ ಅಷ್ಟರಲ್ಲಿ ಕತ್ತಲೇ ಆಗೊಕ್ಕೇ ಶುರು ಆಗ್ಬಿಟ್ಟಿರತ್ತೆ. ಸಂಜೆ ೪ ಕ್ಕೆ ಹೊರಗೆ ಬಂದು ನೋಡಿದರೆ ರಾತ್ರಿ ೮-೯ ಗಂಟೆಯಾಗಿದೆಯೇನೋ ಅನ್ನೋ ಅನುಭವ. ಈ ಚಳಿಯ ಜೊತೆಗೆ ಮಳೆರಾಯನ ಅಬ್ಬರಾನೂ ಕೆಲವೊಮ್ಮೆ ಇರತ್ತೆ .... ಆಗ ಅದು ನಮ್ಮ ಚಿತ್ರರಂಗದ ಭಾಷೆಯಲ್ಲಿ ಹೇಳಬೇಕು ಅಂದ್ರೆ ಡೆಡ್ಲೀ ಕಾಂಬಿನೇಶನ್ !!  ಇಂತಹ ಸಮಯದಲ್ಲೇ ಇಲ್ಲಿ ಜನ ಗುಂಡು ಹಾಕೋ , ದಮ್ಮು ಎಳೆಯೋ ಗ್ರಾಫ್ ಗಳು ಸುಯ್ಯೇಂದು ಮೇಲಕ್ಕೆ ಹೊಂಟೋಗೋದು.ಇವೆರಡರ ಸಹವಾಸವಿಲ್ಲದ ನಮ್ಮಂತಹ ಒಂಟಿ ಪಿಶಾಚಿಗಳು ಬಿಸಿ ಬಿಸಿ ಚಹಾ ಹೀರ್ಕೋಬೇಕು ಅಷ್ಟೇ !

ಈ ದೇಶದಲ್ಲಿ ಮೊದಲೇ ಜನ ಕಮ್ಮಿ [ ನಮ್ಮ್ ದೇಶಕ್ಕಿಂತಮೂರುಪಟ್ಟು ವಿಸ್ತಾರವಾಗಿದ್ದರೂ , ಜನಸಂಖ್ಯೆ ನಮ್ಮ ೧/೩ ಭಾಗದಷ್ಟು !, ಹಾಗಾಗಿ ಭಾರತೀಯರು ಇಲ್ಲಿ ಜನರನ್ನ ಮಿಸ್ ಮಾಡ್ಕೊಂಡ್ರೆ ಆಶ್ಚರ್ಯ ಏನು ಇಲ್ಲ ಬಿಡಿ. ] ಇನ್ನು ಚಳಿಗಾಲ ಅಂದ್ರೆ ಆ ಇರೋ ಜನಾನೂ ಹೊರಕ್ಕೆ ಬರೋಲ್ಲ... ರಸ್ತೆಗಳು, ಅಂಗಡಿಗಳು, ಆಫೀಸುಗಳು, ಆಟದ ಮೈದಾನಗಳು, ಶಾಪಿಂಗ್ ಮಾಲುಗಳು, ಸಿನಿಮಾ ಥಿಯೇಟರ್ಗಳು, ದೇವಸ್ಥಾನಗಳು, ಹೋಟೆಲ್‍ಗಳು, ಪ್ರವಾಸೀ ತಾಣಗಳು, ಬಸ್ ತಂಗುದಾಣಗಳು ಒಟ್ಟ್ನಲ್ಲಿ ಎಲ್ಲಾ ...... ಬಿಕೋ ಬಿಕೋಗಳು !

ಹಾಗಾದ್ರೆ ಮನೇಲಿ ಕುಂತಕೊಂಡು ಜನ ಎನ್ ಮಾಡ್ತಾರೆ ?  ವರ್ಕ್ ಫ್ರಮ್ ಹೋಮ್ ಭಾರ ಇರೋ ಅಲ್ಪ ಸ್ವಲ್ಪ ಜನರಲ್ಲಿ ಸ್ವಲ್ಪ ಜನ ಅಷ್ಟು ಇಷ್ಟು ಕೆಲಸ ಮಾಡ್ತಾರೆ, ಬಿಸಿ ಬಿಸಿ ಅಡಿಗೆ ಮಾಡ್ಕೋತಾರೆ, ಚಹಾ/ಕಾಫಿ ಕುಡೀತಾರೆ, ಟಿವಿ ನೋಡ್ತಾರೆ, ಮೂವೀಸ್ ದಿನಕ್ಕೆ ಒಂದೋ ಎರಡೋ, ಗುಂಡು ಮತ್ತು / ಅಥವಾ ದಮ್ಮಿನ ಆರಾಧಕರಿಗೆ ಟೈಮ್ ಪಾಸ್ನ ಚಿಂತೆ ಅಷ್ಟು ಇರೋದಿಲ್ಲ, ಕುಟುಂಬದವರ ಜೊತೆ ಕಾಲ ಕಳೆಯೋಕ್ಕೆ ತುಂಬಾ ಸಮಯ ಸಿಗತ್ತೆ [ ಜೊತೆಗಿದ್ದರೆ ....ಇಲ್ಲಾಂದ್ರೆ ಕರ್ಮ !] ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ಹೀಟರ್ ನ ಮುಂದೆ ಕೂತ್ಕೊಂಡು ಕೈ ಉಜ್ಜಿಕೊಳ್ಳೋದು, ಮೈ ಬೆಚ್ಚಗೆ ಮಾಡಿಕೊಳ್ಳೋದು, ಮುದರಿ ಮುದರಿ ಕೂತ್ಕೊಳ್ಳೋದು, ಬೆಚ್ಚನೆ ಹೊದ್ದು ಮಲಗೋದು ದಿನ ಪೂರ್ತಿ ನಡೀತಾನೆ ಇರತ್ತೆ .


ಅದಕ್ಕೇ ಹೇಳಿದ್ದು "ಚಳೀಗಾಲ ಅಂದ್ರೆ ಮೈ ಕಾಯಿಸೋದೇ ದೊಡ್ಡ ಕೆಲಸ !" ಒಪ್‌ಕೋತೀರಾ ?
Pic from : Google images